ಮಂಗಳೂರು, ಅ. 12(DaijiworldNews/TA): ನಿಷೇಧಿತ ಪಿಎಫ್ ಐ ಸಂಘಟನೆಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಡಿದ ಆರೋಪದಲ್ಲಿ ಸೈಯದ್ ಇಬ್ರಾಹೀಂ ತಂಙಳ್(55)ನನ್ನು ಮಂಗಳೂರಿನ ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಂಗಳೂರಿನ 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಮತ್ತು ಎನ್ಐಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನ್ಯಾಯಾಲಯವು ಆರೋಪಿಗೆ ಅಕ್ಟೋಬರ್ .24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 2022ರ ಸೆಪ್ಟೆಂಬರ್ .28ರಂದು ಪಿಎಫ್ಐ ಕಾನೂನುಬಾಹಿರ ಸಂಘಟನೆ ಎಂದು ಕೇಂದ್ರ ಸರಕಾರ ಘೋಷಿಸಿ ನಿಷೇಧಿಸಿತ್ತು. 2025ರ ಅಕ್ಟೋಬರ್ .9ರಂದು ಆರೋಪಿ ಉಪ್ಪಿನಂಗಡಿಯ ರಾಮಕುಂಜ ಗ್ರಾಮದ ಸೈಯದ್ ಇಬ್ರಾಹಿಂ ತಂಙಳ್ ಸಾಮಾಜಿಕ ಜಾಲತಾಣವಾದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಪಿಎಫ್ಐ ಸಂಘಟನೆಯ ಪರವಾಗಿ ಪೋಸ್ಟ್ ಹಂಚಿ, ಪ್ರಚಾರ ಮಾಡಿ ಆತಂಕವನ್ನುಂಟು ಮಾಡಿರುವುದಾಗಿ ಬಂದರ್ ಠಾಣೆಯ ಎಸ್ಸೈ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಮಂಗಳೂರು ಉರ್ವಸ್ಟೋರ್ ಬಳಿ ಆರೋಪಿಯನ್ನು ಬಂಧಿಸಿ ಆತನ ವಶದಲ್ಲಿದ್ದ ಮೊಬೈಲ್ ಫೋನ್ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.