ಕುಂದಾಪುರ,ಅ. 11 (DaijiworldNews/AK): ಕುಂದಾಪುರ ಪೊಲೀಸರು ಇತ್ತೀಚೆಗೆ ನಡೆದ ಚಿನ್ನದ ಸರ ಕದಿಯುವ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಮತ್ತು ದಾವಣಗೆರೆಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.




ದೂರುದಾರೆ ಮೀನಾಕ್ಷಿ ತಮ್ಮ ಮಗಳು ಜ್ಯೋತಿ ಜೊತೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕುಂದಾಪುರದ ಶಾಸ್ತ್ರಿ ಪಾರ್ಕ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಿಎಸ್ಎನ್ಎಲ್ ಕಚೇರಿ ಬಳಿ, ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಕುತ್ತಿಗೆಯಲ್ಲಿ ಕಪ್ಪು ಮಣಿಗಳಿಂದ ಕೂಡಿದ ಚಿನ್ನದ ಸರವನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಜಯರಾಮ್ ಡಿ ಗೌಡ ನೇತೃತ್ವದಲ್ಲಿ ಪೊಲೀಸರು ಶಿವಮೊಗ್ಗದ ಸಂಜಯ್ ಎಲ್, ದಾವಣಗೆರೆಯ ವಸಂತ್ ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಒಂದು ಸ್ಕಾರ್ಪಿಯೋ ಕಾರು ಮತ್ತು ಅಪರಾಧಕ್ಕೆ ಬಳಸಲಾದ ಮೋಟಾರ್ ಸೈಕಲ್ ಸೇರಿದಂತೆ 8.2 ಲಕ್ಷ ರೂಪಾಯಿ ಮೌಲ್ಯದ ಕದ್ದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮತ್ತು ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಯಿತು. ಪಿಎಸ್ಐಗಳಾದ ನಂಜನನಾಯಕ್, ಪುಷ್ಪಾ ಮತ್ತು ನೂತನ್ ಹಾಗೂ ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು.