ಮಂಗಳೂರು, ಅ. 11 (DaijiworldNews/AA): ಸುರತ್ಕಲ್ ಮಾರ್ಕೆಟ್ ಮುಂಭಾಗದ ಹೋಲ್ಸೇಲ್ ಮಾರಾಟ ಮಳಿಗೆಯೊಂದರಲ್ಲಿ ಇಟ್ಟಿದ್ದ ಬರೋಬ್ಬರಿ 3.5 ಲಕ್ಷ ರೂ. ನಗದು ಕಳ್ಳತನವಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಮಾಲೀಕರು ದಿನನಿತ್ಯದಂತೆ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿರುವುದು ತಿಳಿದುಬಂದಿದೆ.
ರಾತ್ರಿಯ ವೇಳೆಯಲ್ಲಿ ಅಂಗಡಿಯ ಬೀಗವನ್ನು ಒಡೆಯಲಾಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಅಂಗಡಿ ಮಾಲೀಕರಾದ ಶಮೀರ್ ಅವರು ಸಾಮಾನ್ಯವಾಗಿ ವ್ಯಾಪಾರದ ನಂತರ ದಿನದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಮರುದಿನ ಕೆಲವು ಪಾವತಿಗಳನ್ನು ಮಾಡಬೇಕಾಗಿದ್ದರಿಂದ, ಗುರುವಾರ ರಾತ್ರಿ ಅವರು 3.5 ಲಕ್ಷ ರೂ. ನಗದನ್ನು ಡ್ರಾಯರ್ನಲ್ಲಿ ಇರಿಸಿ ಅಂಗಡಿಗೆ ಬೀಗ ಹಾಕಿ ಹೋಗಿದ್ದರು.
ಕಳ್ಳತನದ ಬಗ್ಗೆ ಅರಿತ ತಕ್ಷಣವೇ ಮಾಲೀಕರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಳ್ಳರ ಚಲನವಲನಗಳು ಸೆರೆಯಾಗಿದ್ದು, ಆರೋಪಿಯನ್ನು ಗುರುತಿಸಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.