ಉಡುಪಿ,ಅ. 10 (DaijiworldNews/AK): ದ್ವೇಷ ಭಾಷಣ ಪ್ರಕರಣದ ಜಾಮೀನು ಷರತ್ತು ಪಾಲಿಸದ ಆರೋಪದ ಮೇಲೆ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಅವರನ್ನು ಉಡುಪಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ರಿಯಾಝ್ ಕಡಂಬು ವಿರುದ್ಧ ದ್ವೇಷ ಭಾಷಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಅವರು ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದು, ಇದರಲ್ಲಿ 15 ದಿನಗಳಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ ರಿಯಾಝ್ ಕಡಂಬು ಠಾಣೆಗೆ ಹಾಜರಾಗದೆ ಷರತ್ತನ್ನು ಉಲ್ಲಂಘಿಸಿದ್ದರು ಎನ್ನಲಾಗಿದೆ.
ಇದೀಗ ಉಡುಪಿ ಪೊಲೀಸರು ರಿಯಾಝ್ ಕಡಂಬು ಅವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.