ಉಡುಪಿ,ಅ. 09 (DaijiworldNews/AK): ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಾಜೀವನಗರ ಎಂಬಲ್ಲಿ ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೋಲಿಸರು ವಶಕ್ಕೆ ಪಡೆಯಲಾಗಿದೆ.

ಆರೋಪಿ ಸೀತಾರಾಮ ರೆಡ್ಡಿ ತೌಟರೆಡ್ಡಿ(21ವರ್ಷ) ಎಂದು ತಿಳಿದು ಬಂದಿದೆ. ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯಕುಮಾರಿ ಎಸ್.ಎನ್ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಇತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ತಾನು ಮೇಘಾಲಯದಿಂದ ಆನ್ಲೈನ್ ಆಪ್ (ರೆಡಿಟ್) ಮುಖಾಂತರ ಗಾಂಜಾ ಮಾದಕ ವಸ್ತುಗಳನ್ನು ಅಂಚೆ ಮುಖೇನ ಖರೀದಿ ಮಾಡಿ ಮಣಿಪಾಲ ಹಾಗೂ ಉಡುಪಿ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯ ವಶದಲ್ಲಿದ್ದ ಎರಡು ಪಾರ್ಸೆಲ್ ಪ್ಲಾಸ್ಟಿಕ್ ಕವರ್ಗಳಲ್ಲಿ ಡೈಪರ್ಗಳ ಮಧ್ಯದಲ್ಲಿ, ಒಟ್ಟು ಮೂರು ಪ್ಯಾಕ್ ಏರ್ ಜಿಪ್ ಬ್ಯಾಗ್ ನಲ್ಲಿ ಸುಮಾರು 01 ಕೆಜಿಗೂ ಹೆಚ್ಚು ಗಾಂಜಾ ಇರುವುದನ್ನು ಕಂಡು ಬಂದಿದೆ.
ಸದ್ರಿ ಪಾರ್ಸೆಲ್ ಪ್ಲಾಸ್ಟಿಕ್ ಕವರ್ ನಲ್ಲಿ ಇನ್ನೊಂದು ಏರ್ ಜಿಪ್ ಕವರ್ ಇದ್ದು ಅದರಲ್ಲಿ ಖಾಲಿ ಪೇಪರ್ ನಲ್ಲಿ ಗಾಂಜಾವನ್ನು ಹಾಕಿ ಸುತ್ತಿದ ಎರಡು ಪ್ಯಾಕ್ ಗಳು ಹಾಗೂ ಖಾಲಿ ಎರಡು ಏರ್ ಜಿಪ್ ಕವರ್ ಗಳು, ಟೇಬಲ್ ಮೇಲಿನ ಗಾಂಜಾವನ್ನು ಎಳೆಯುವ ಎರಡು ಬಾಂಗ್ ಹಾಗೂ 1 ಐಫೋನ್ ಹಾಗೂ ನಗದು ರೂ. 3180ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಗಾಂಜಾದ ಅಂದಾಜು ಮೌಲ್ಯ ರೂ 60000 ಆಗಬಹುದು. ಆರೋಪಿಯ ಮೊಬೈಲ್ನ ಅಂದಾಜು ಮೌಲ್ಯ 75000 ರೂ ಆಗಬಹುದು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.