ಸುಳ್ಯ, ಅ. 08 (DaijiworldNews/TA): ಕತ್ತಲು ಬೆಳಕಿನಾಟದ ವರ್ಣ ವೈಭವ, ಆಕಾಶದಲ್ಲಿ ವರ್ಣ ಚಿತ್ತಾರ ಬಿಡಿಸಿದ ಸಿಡಿ ಮದ್ದು ಪ್ರಯೋಗ, ಝಗಮಗಿಸುವ ವಿದ್ಯುತ್ ದೀಪಗಳ ವರ್ಣಮಯ ಅಲಂಕಾರ, ಜನಮನ ಗೆದ್ದ ಸ್ತಬ್ಧ ಚಿತ್ರಗಳ ಮೋಹಕ ಭಂಗಿ. ಅಬ್ಬರಿಸಿದ ತಾಳಕ್ಕೆ ನೃತ್ಯದ ಸೊಬಗು ನೀಡಿದ ಯುವ ಸಮೂಹ, ಹುಲಿ ವೇಷ, ಪಿಲಿ ಕುಣಿತ.. ಚೆಂಡೆ ವಾದ್ಯ ಮೇಳಗಳು.ಒಂಭತ್ತು ದಿನಗಳ ಕಾಲ ನಡೆದ ಸುಳ್ಯ ದಸರಾದ ಸಮಾಪನದ ಅಂಗವಾಗಿ ಅ.7ರ ರಾತ್ರಿ ಸುಳ್ಯ ನಗರದಲ್ಲಿ ವೈಭವದ ವರ್ಣನಾತೀತ ಚಿತ್ತಾರ ಬಿಡಿಸಿದ ವರ್ಣ ರಂಜಿತ ಶೋಭಾಯಾತ್ರೆ ಮನಸೂರೆಗೊಂಡಿತು.





ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ, ಶ್ರೀ ಶಾರದಾಂಬಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ 54ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ -ಸುಳ್ಯ ದಸರಾದ ಮೆರವಣಿಗೆ ಮನ ಸೆಳೆಯಿತು.
ವಿಶೇಷವಾಗಿ ಅಲಂಕರಿಸಿದ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಮಂಟಪದಲ್ಲಿ ಕುಳ್ಳಿರಿಸಿದ ಶ್ರೀದೇವಿಯ ವಿಗ್ರಹ ಶೋಭಾಯಾತ್ರೆಯ ಮುಂಭಾಗದಲ್ಲಿ ಮತ್ತು ಅದರ ಹಿಂದೆ ಸಾಲಾಗಿ ಸಾಗಿಬಂದ ಆಕರ್ಷಕ ಸ್ತಬ್ಧ ಚಿತ್ರಗಳು.ಎಲ್ಲೆಡೆ ಆವರಿಸಿದ ಕತ್ತಲನ್ನು ಸೀಳಿ ಬಂದ ಬೆಳಕಿನ ಕಿರಣಗಳು ಹೊಸ ವರ್ಣ ಲೋಕವನ್ನು ಸೃಷ್ಟಿಸಿತು.