ಉಡುಪಿ, ಅ. 08 (DaijiworldNews/AA): ತಿಂಗಳುಗಟ್ಟಲೆಯಿಂದ ಕಾಮಗಾರಿ ಪೂರ್ಣವಾಗದೇ ಉಳಿದಿದ್ದ ಸಂತೆಕಟ್ಟೆ ಅಂಡರ್ಪಾಸ್ ಯೋಜನೆಯು ಕೊನೆಗೂ ಪುನರಾರಂಭಗೊಂಡಿದೆ.







ಭಾರೀ ಮಳೆಯ ಕಾರಣದಿಂದ ಈ ಹಿಂದೆ ಸ್ಥಗಿತಗೊಂಡಿದ್ದ ಕಾಮಗಾರಿಯು, ಇದೀಗ ಹವಾಮಾನ ಸುಧಾರಿಸಿದ ಬೆನ್ನಲ್ಲೇ ಪುನಃ ಆರಂಭವಾಗಿದೆ. ಕಾಮಗಾರಿ ಸ್ಥಗಿತವಾದ ಬಗ್ಗೆ ಇತ್ತೀಚೆಗಷ್ಟೇ ದಾಯ್ಜಿವರ್ಲ್ಡ್ ನಲ್ಲಿ ವರದಿ ಪ್ರಕಟವಾದ ನಂತರ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬಾಕಿ ಉಳಿದ ಕಾಮಗಾರಿಯನ್ನು ಮುಂದುವರಿಸಲು ಮುಂದಾಗಿದ್ದಾರೆ. ಕುಂದಾಪುರದಿಂದ ಉಡುಪಿಯ ಕಡೆಗೆ ಪ್ರಯಾಣಿಸುವ ವಾಹನಗಳಿಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಕಿ ಉಳಿದಿದ್ದ ಕಾಂಕ್ರೀಟ್ ಕೆಲಸವು ಪ್ರಾರಂಭವಾಗಿದೆ.
ಈ ಯೋಜನೆಯು ಪ್ರಾರಂಭವಾದಾಗಿನಿಂದ ಈಗಾಗಲೇ ಎರಡು ಮಳೆಗಾಲಗಳು ಕಳೆದಿವೆ. ಮುಂದಿನ ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಎಂಬ ಆತಂಕ ಸ್ಥಳೀಯ ನಿವಾಸಿಗಳಲ್ಲಿ ಎದುರಾಗಿದೆ. ತಾತ್ಕಾಲಿಕ ರಸ್ತೆಗಳು ಮಳೆ ಮತ್ತು ವಾಹನಗಳ ಭಾರೀ ಸಂಚಾರದಿಂದಾಗಿ ಹೊಂಡಗಳಾದ ಕಾರಣ ಸ್ಥಳೀಯರು ಮತ್ತು ಪ್ರಯಾಣಿಕರು ಈ ಪ್ರದೇಶದಲ್ಲಿ ಸಂಚರಿಸಲು ತೀವ್ರ ತೊಂದರೆ ಎದುರಿಸುತ್ತಿದ್ದರು.
ಕಾಮಗಾರಿ ಸ್ಥಗಿತದಿಂದಾಗಿ ಸಾರ್ವಜನಿಕರ ಅಸಮಾಧಾನ ಹೆಚ್ಚಿತ್ತು. ನಾಗರಿಕರು ಮತ್ತು ಸ್ಥಳೀಯ ನಾಯಕರೂ ಸಹ ನಿಧಾನಗತಿಯ ಪ್ರಗತಿಯ ಬಗ್ಗೆ ಪದೇ ಪದೇ ಅತೃಪ್ತಿ ವ್ಯಕ್ತಪಡಿಸಿದ್ದರು. ಸ್ಥಗಿತಗೊಂಡ ಕಾಮಗಾರಿಯು ವಾಹನ ಚಾಲಕರು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಾನಿಗೊಳಗಾದ ಮತ್ತು ಹೊಂಡಗಳಿಂದ ತುಂಬಿದ ತಾತ್ಕಾಲಿಕ ರಸ್ತೆಗಳಲ್ಲಿ ಸಂಚರಿಸುವಂತಾಗಿತ್ತು.
ಈಗ ಕಾಮಗಾರಿಯು ಪುನರಾರಂಭಗೊಂಡಿರುವುದರಿಂದ, ಅಧಿಕಾರಿಗಳು ಈ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಸಂತೆಕಟ್ಟೆ ಅಂಡರ್ ಪಾಸ್ ಮೂಲಕ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವುದು ಅಗತ್ಯವಿದೆ.
ಈ ರಸ್ತೆಯು ಕುಂದಾಪುರ ಮತ್ತು ಉಡುಪಿಯ ನಡುವಿನ ಪ್ರಮುಖ ಕೊಂಡಿಯಾಗಿದೆ. ಈ ರಸ್ತೆಯು ಭಾರೀ ವಾಹನ ಸಂಚಾರ ಮತ್ತು ವ್ಯವಹಾರ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವುದರಿಂದ ಇದರ ಸಕಾಲಿಕ ಪೂರ್ಣಗೊಳಿಸುವಿಕೆ ಅತ್ಯಂತ ನಿರ್ಣಾಯಕವಾಗಿದೆ.