ಬಂಟ್ವಾಳ, ಅ. 07 (DaijiworldNews/AA): ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಬಂಟ್ವಾಳ ವಿಧಾನಸಭಾ ಕ್ಷೇತ್ರದ 2025-27ರ ಸಾಲಿನ ಪದ ಪ್ರಧಾನ ಸಮಾರಂಭ ಮತ್ತು ಮರಿಯಾಲದ ನೆನಪು-ಮಕ್ಕಳ ಸಮ್ಮಿಲನ ಇತ್ತೀಚೆಗೆ ಬಂಟ್ವಾಳ ತಾಲೂಕು ಕುಲಾಲ ಸಮುದಾಯ ಭವನ ಪೊಸಳ್ಳಿಯಲ್ಲಿ ನಡೆಯಿತು.

ಮಕ್ಕಳ ಸಮಾಗಮದೊಂದಿಗೆ ಮಕ್ಕಳ ವಿವಿಧ ವ್ಯಾಪಾರ ಅಂಗಡಿಗಳ ಮಕ್ಕಳ ಸಂತೆಯನ್ನು ಹಿರಿಯರಾದ ಮೋಹನ್ ಅರ್ಕಮೆ ಮತ್ತು ಭಾಸ್ಕರ್ ಕೊಲ್ನಾಡ್ ಉದ್ಘಾಟಿಸಿದರು. ನಂತರ ನಡೆದ ಒಕ್ಕೂಟದ ನೂತನ ಅಧ್ಯಕ್ಷ ಸುಮೀತ್ ಸಾಲಿಯಾನ್ ಸೊರ್ನಾಡ್ ಮತ್ತು ತಂಡದ ಪಧ ಗ್ರಹಣ ನೆರವೇರಿಸಿ ಶುಭ ಹಾರೈಸಿದರು.
ನಂತರ ಕುಟುಂಬದಲ್ಲಿ ಮಕ್ಕಳ ಯಶಸ್ಸಿನಲ್ಲಿ ತಾಯಂದಿರ ಪಾತ್ರದ ಬಗ್ಗೆ ಕಾರ್ಕಳ ಸಾಣೂರು ರಾಜೇಶ್ವರಿ ಪಿ.ಯು. ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ರಶ್ಮಿ ರಾಜೇಶ್ ಉಪನ್ಯಾಸ ನೀಡಿದರು. ಮಧ್ಯಾಹ್ನ ನಡೆದ ಮರಿಯಾಲದ ನೆನಪು ಸಭಾ ಕಾರ್ಯಕ್ರಮವನ್ನು ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೌಂದರ್ಯ ರಮೇಶ್ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಮಡಿಕೇರಿ ಉಪ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ನಾರಾಯಣ ಮೂಲ್ಯ, ಬಂಟ್ವಾಳ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಮೂಲ್ಯ ಅನಿಲಡೆ, ವೇಣೂರು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಗಿರೀಶ್ ಕುಲಾಲ್ ವೇಣೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ 2025-27 ರ ಸಾಲಿನ ಸರ್ವಜ್ಞ ಪ್ರಶಸ್ತಿಯನ್ನು ಧಾರ್ಮಿಕ ರಂಗದಲ್ಲಿ ಉಮೇಶ್ ಸಾಯ ಬೇಡಗುಡ್ಡೆ, ಪ್ರಸೂತಿ ತಜ್ಙೆ ರಾಧಾ ಕಾಮಾಜೆ, ನಿವೃತ್ತ ಶಿಕ್ಷಕಿ ಜಯಂತಿ ಗಂಗಾಧರ್ ಗಾಣದಪಡ್ಪು, ಉಧ್ಯಮಿ ಗಂಗಾಧರ್ ಶೇರಾ, ಪೈಂಟಿಗ್ ಕಲಾವಿದ ಸುಮಂತ್ ಆರ್ಟ್ಸ್ ನ ವಿಜಯ್.ಕೆ ಅವರಿಗೆ ಪ್ರದಾನ ಮಾಡಲಾಯಿತು. ಮಣ್ಣಿನ ಜತೆ ಮಕ್ಕಳೊಂದಿಗೆ ಹಿರಿಯರು ರಾಜ್ಯ ಮಟ್ಟದ ಪೊಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವೇದಿಕೆಯ ಸದಸ್ಯರ ಸಾಧಕ ಮಕ್ಕಳಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.