ಮಂಗಳೂರು, ಅ. 07 (DaijiworldNews/AA): ನಗರದ ಪ್ರಮುಖ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿಯ ಮೇಲೆ ಬರ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿ, ಇ-ಸಿಗರೇಟ್ ಮತ್ತು ಇತರ ವಸ್ತುಗಳು ಸೇರಿದಂತೆ 9.72 ಲಕ್ಷ ಮೌಲ್ಯದ ಸೊತ್ತುಗಳನ್ನು ಅಕ್ಟೋಬರ್ 7ರಂದು ಜಪ್ತಿ ಮಾಡಿದ್ದಾರೆ.

ಮಂಗಳೂರಿನ ಲಾಲ್ಬಾಗ್ ಬಳಿಯ ಅಂಗಡಿಯೊಂದು ಯಾವುದೇ ಪರವಾನಗಿ ಪಡೆಯದೇ ಇ-ಸಿಗರೇಟ್, ಹುಕ್ಕಾ ಪರಿಕರಗಳು ಮತ್ತು ಭಾರತೀಯ ಹಾಗೂ ವಿದೇಶಿ ಸಿಗರೇಟ್ಗಳನ್ನು ಕಾನೂನುಬಾಹಿರವಾಗಿ ಮಾರಾಟ ಮತ್ತು ಸಂಗ್ರಹಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ವಸ್ತುಗಳನ್ನು ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಯುವಕರಿಗೆ ಸರಬರಾಜು ಮಾಡಲಾಗುತ್ತಿದೆ ಮತ್ತು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಬರ್ಕೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ, ಠಾಣಾ ಪಿಎಸ್ಐ ಮತ್ತು ಇತರ ಸಿಬ್ಬಂದಿಗಳೊಂದಿಗೆ ಸೋಮವಾರ ಸಂಜೆ, ಅಕ್ಟೋಬರ್ 6 ರಂದು ಈ ದಾಳಿ ನಡೆಸಲಾಯಿತು.
ದಾಳಿಯ ಸಮಯದಲ್ಲಿ, ಪೊಲೀಸರು ವಿವಿಧ ಬ್ರ್ಯಾಂಡ್ಗಳ 847 ಇ-ಸಿಗರೇಟ್ಗಳನ್ನು (4,43,125 ಮೌಲ್ಯ), 86 ಸಿಗರೇಟ್ ಪ್ಯಾಕ್ಗಳನ್ನು (5,09,120 ಮೌಲ್ಯ) ಮತ್ತು ಹುಕ್ಕಾ ಸಂಬಂಧಿತ ವಸ್ತುಗಳನ್ನು (20,500 ಅಂದಾಜು ಮೌಲ್ಯ) ಜಪ್ತಿ ಮಾಡಿದ್ದಾರೆ. ಒಟ್ಟು 9,72,745 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಂಗಡಿ ಮಾಲೀಕ ಶಿವು ದೇಶಕೋಡಿ, ಕುದ್ರೋಳಿ ನಿವಾಸಿ ಇಬ್ರಾಹಿಂ ಇರ್ಷಾದ್ (33) ಮತ್ತು ಬಂಟ್ವಾಳ ನಿವಾಸಿ ಸಂತೋಷ್ (32) ಅವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.