ಬೆಳ್ತಂಗಡಿ, ಅ. 07 (DaijiworldNews/AA): ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು ಸುಮಾರು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ತಾಲೂಕಿನ ಕುತ್ಲೂರು ಗ್ರಾಮದ ಮಂಜುಶ್ರೀ ನಗರದಲ್ಲಿ ನಡೆದಿದ್ದು, ಅ. 6ರಂದು ಬೆಳಕಿಗೆ ಬಂದಿದೆ.

ಮಂಜುಶ್ರೀ ನಗರದ ಅವಿನಾಶ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಅ. 2ರ ಮಧ್ಯಾಹ್ನದಿಂದ ಅ. 6ರ ಸಂಜೆಯ ನಡುವೆ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ಮನೆಯ ಬೆಡ್ ರೂಮಿನ ಕಪಾಟಿನ ಚಿಲಕವನ್ನು ಮುರಿದು ಅದರೊಳಗಿದ್ದ ವ್ಯಾನಿಟಿ ಬ್ಯಾಗ್ ನಲ್ಲಿ ಟಿಫಿನ್ ಬಾಕ್ಸ್ ನಲ್ಲಿ ಇಟ್ಟಿದ್ದ ಹಾಗೂ ಬ್ಯಾಗ್ ನ ಪರ್ಸ್ ನಲ್ಲಿ ಇಟ್ಟಿದ್ದ ಎರಡೆಳೆಯ ಚಿನ್ನದ ಕರಿಮಣಿ ಸರ 1, ಎರಡೆಳೆಯ ಮುತ್ತಿನ ಸರ ಜತೆಗೆ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಸರ 1, ಚಿನ್ನದ ಬ್ರಾಸ್ ಲೈಟ್ 2, ಮಕ್ಕಳ ಚಿನ್ನದ ಸರ 2, ಚಿನ್ನದ ಉಂಗುರ 1, ಬೆಂಡೋಲೆ 1 ಜೊತೆ, ಕಿವಿಯ ಚಿಕ್ಕ ಓಲೆಗಳು 5 ಜೊತೆ, ಚಿನ್ನದ ಉಂಗುರಗಳು 3 ನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳವಾದ ಒಟ್ಟು ಚಿನ್ನದ ತೂಕ ಸುಮಾರು 149 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ರೂ 9,50,000 ಆಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.