ಮಂಗಳೂರು, ಅ. 05 (DaijiworldNews/TA): ಭೂಗತ ಪಾತಕಿ ಕಲಿ ಯೋಗೀಶ್ ಸಹಚರನಾಗಿ, ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಮೂಲ್ಕಿ ಚಿತ್ರಾಪು ನಿವಾಸಿ ಶ್ರೀನಿವಾಸ್ ಶೆಟ್ಟಿ ಯಾನೆ ಶೀನು (45) ಬಂಧಿತ ಆರೋಪಿ. ಈತ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೋಕಾ ಪ್ರಕರಣದ ಅರೋಪಿಯಾಗಿದ್ದಾನೆ.

ಕಳೆದ 8 ವರ್ಷಗಳಿಂದ ದಸ್ತಗಿರಿಗೆ ಸಿಗದೆ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ವಿರುದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೈಸೂರು ವಾರೆಂಟ್ ಹಾಗೂ ಉದ್ಘೋಷಣೆ ಹೊರಡಿಸಿತ್ತು. ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಮೂಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಬಿ ಎಸ್, ಪೊಲೀಸ್ ಉಪ ನಿರೀಕ್ಷಕ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಿಬಂದಿಯವರಾದ ಎಎಸ್ಐ ಸುರೇಶ್ ಕುಂದರ್, ಹೆಡ್ ಕಾನ್ಸ್ಟೇಬಲ್ ಉದಯ ಅವರ ಒಂದು ತಂಡವನ್ನು ರಚಿಸಲಾಗಿತ್ತು.
ಆರೋಪಿ ಶ್ರೀನಿವಾಸ್ ಮುಂಬಯಿಯಲ್ಲಿರುವ ಬಗ್ಗೆ ಖಚಿತ ಮಾಹಿತಿಯಂತೆ ಅಲ್ಲಿಗೆ ತೆರಳಿ ಬಂಧಿಸಲಾಗಿದೆ. ಆರೋಪಿಯನ್ನು ಅ.4 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.