ಉಡುಪಿ, ಅ. 04 (DaijiworldNews/TA): ಮಲ್ಪೆ ಬೀಚ್ನಲ್ಲಿ ನುರಿತ ಲೈಫ್ ಗಾರ್ಡ್ ನೇಮಕಾತಿಗೊಳಿಸುವಂತೆ ಮೀನುಗಾರರ ಮುಖಂಡ ವಿಶ್ವಾಸ್ ಅಮೀನ್ ಮನವಿ ಮಾಡಿದ್ದಾರೆ.

ಶುಕ್ರವಾರ ಮಲ್ಪೆ ಬೀಚ್ನಲ್ಲಿ ಪ್ರವಾಸಿಗರು ಸಮುದ್ರದಲ್ಲಿ ಈಜಲು ಹೋಗಿ ಅವಘಡಕ್ಕೆ ಸಿಲುಕಿ, ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಬಗ್ಗೆ ಮಾಧ್ಯಮ ಹಾಗೂ ಸಾರ್ವಜನಿಕರ ನಡುವೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವೆಂಬ ಆಕ್ಷೇಪಣೆಗಳು ಕೇಳಿಬರುತ್ತಿವೆ.
ಪ್ರಮುಖ ಕಾರಣಗಳಾಗಿ, ಸಮುದ್ರದಲ್ಲಿ ಈಜಲು ನಿರ್ಬಂಧಿಸುವ ಕನಿಷ್ಠ ಮೂವರು ನುರಿತ ಲೈಫ್ ಗಾರ್ಡ್ಗಳು ಸ್ಥಳದಲ್ಲಿ ಇಲ್ಲದೇ ಇದ್ದುದು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರನ್ನು ನಿಯಂತ್ರಿಸಲು ಮತ್ತು ಅವಘಡದ ಸಂದರ್ಭದಲ್ಲಿ ರಕ್ಷಣೆ ನೀಡಲು ಅಸಾಧ್ಯವಾದುದನ್ನು ಮೀನುಗಾರ ಮುಖಂಡ ವಿಶ್ವಾಸ್ ವಿ ಅಮೀನ್ ಖಂಡಿಸಿದ್ದಾರೆ.
ಮಲ್ಪೆ ಬೀಚ್ನಲ್ಲಿ ಈಜಲು ಅನುಭವವಿಲ್ಲದ ಲೈಫ್ ಗಾರ್ಡ್ಗಳನ್ನು ನೇಮಿಸುವ ಕುರಿತು ಯಕ್ಷ ಪ್ರಶ್ನೆಗಳು ಉದಯವಾಗಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಮಲ್ಪೆ ಹಾಗೂ ಉಡುಪಿ ಜಿಲ್ಲೆಗಳ ಪ್ರಮುಖ ಬೀಚ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಗೊಂಡ ನುರಿತ ಲೈಫ್ ಗಾರ್ಡ್ಗಳನ್ನು ತ್ವರಿತವಾಗಿ ನೇಮಿಸುವಂತೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಅವರಿಗೆ ವಿಶ್ವಾಸ್ ಅಮೀನ್ ಮನವಿ ಮಾಡಿದ್ದಾರೆ.