ಉಡುಪಿ, ಅ. 04 (DaijiworldNews/TA): ಉಡುಪಿ ಸಾರ್ವಜನಿಕ ಶಾರದೋತ್ಸವ ಸಮಿತಿ ಮತ್ತು ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಸಹಯೋಗದಲ್ಲಿ ಏರ್ಪಡಿಸಿದ್ದ ಉಡುಪಿ ದಸರಾ ಶಾರದೋತ್ಸವದ 10ನೇ ವರ್ಷದ ಸಂಭ್ರಮವು ಅಕ್ಟೋಬರ್ 3 ರಂದು ಭವ್ಯ ಮೆರವಣಿಗೆಯೊಂದಿಗೆ ಸಮಾರೋಪಗೊಂಡಿತು.


ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಮಠದ ಕಿರಿಯ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ, ಯಶ್ ಪಾಲ್ ಸುವರ್ಣ ಅವರಿಂದ ರಾಜಾಂಗಣ ಕೃಷ್ಣ ಮಠದಲ್ಲಿ ಮೆರವಣಿಗೆಯ ಉದ್ಘಾಟನೆ ನೆರವೇರಿತು. ಈ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಸಾರ್ವಜನಿಕ ಶಾರದೋತ್ಸವ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಶಾರದಾ ದೇವಿಯ ಮೆರವಣಿಗೆಯಲ್ಲಿ 30ಕ್ಕೂ ಹೆಚ್ಚು ಥೀಮ್ಗಳಲ್ಲಿ ಸಜ್ಜುಗೊಂಡ ಟ್ಯಾಬ್ಲೋಗಳು ಇದ್ದವು, ಹೆಚ್ಚಿನ ಭಕ್ತರನ್ನು ಮನರಂಜಿಸುವಂತೆ ಮಾಡಿದವು. ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಿ ನವದುರ್ಗೆಯ ವಿಗ್ರಹಗಳು, ಜೊತೆಗೆ ಉದ್ಯಾವರ ಪಿತ್ರೋಡಿನ ಒಂಬತ್ತು ಮಹಿಳೆಯರು ನವದುರ್ಗೆಯ ರೂಪದಲ್ಲಿ ಅಲಂಕೃತವಾಗಿದ್ದರು.
ದೇವಿ ಮಹಿಷಮರ್ಧಿನಿ, ದೇವಿ ಸರಸ್ವತಿ, ಶಿವ, ಶ್ರೀ ಕೃಷ್ಣ, ಅಯೋಧ್ಯಾ ರಾಮ ಮಂದಿರದ ಟ್ಯಾಬ್ಲೋಗಳು, ಹಾಗೂ ಚೆಂಡೆ, ಕುಣಿತ ಭಜನೆ, ಹುಲಿ ನೃತ್ಯ ಮತ್ತು ಇತರ ಸಾಂಪ್ರದಾಯಿಕ ಪ್ರದರ್ಶನಗಳು ಮೆರವಣಿಗೆಗೆ ವಿಭಿನ್ನ ಸೌಂದರ್ಯ ಮತ್ತು ವಿಶೇಷ ಆಕರ್ಷಣೆ ನೀಡಿತು. ಚಿಕ್ಕಮಗಳೂರು ಮುಡಿಗೇರಿಯಿಂದ ಬಂದ ಭಾರಿ ಗಾತ್ರದ ಗೋರಿಲ್ಲಾ ಟ್ಯಾಬ್ಲೋ ಮತ್ತು ಕೃತಕ ಆನೆ ಎಲ್ಲರ ಗಮನ ಸೆಳೆಯಿತು.
ಮೆರವಣಿಗೆ ಮಾರ್ಗವು ಕಲ್ಸಂಕ,, ಉಡುಪಿ ನಗರ ಬಸ್ ನಿಲ್ದಾಣ, ಬನ್ನಂಜೆ, ಕರಾವಳಿ ಬೈಪಾಸ್, ಆದಿ ಉಡುಪಿ, ಪಂಡುಬೆಟ್ಟು, ಕಲ್ಮಾಡಿ, ಮಲ್ಪೆ ಸೇರಿದಂತೆ ಸಾಗಿದ್ದು, ಕೊನೆಗೆ ಮಲ್ಪೆ ಕಡಲತೀರದಲ್ಲಿ ಮುಕ್ತಾಯವಾಯಿತು.
ಮಲ್ಪೆ ಕಡಲತೀರದಲ್ಲಿ ಮಲ್ಪೆ ಭಜನ ಮಂದಿರದ ಸಹಕಾರದೊಂದಿಗೆ ಶೃಂಗಾರಿಕ ಲೈಟಿಂಗ್, ಸುಡುಮದ್ದು ಪ್ರದರ್ಶನ, ಭಜನಾ ಕಾರ್ಯಕ್ರಮಗಳು ಮತ್ತು ಸಾಂಪ್ರದಾಯಿಕ ಗಂಗಾ ಆರತಿಗಳು ನಡೆಯುತ್ತಾ ಆಚರಣೆಗಳು ಮುಂದುವರಿದವು. ಕೊನೆಗೆ, ದೇವಿಯ ವಿಗ್ರಹಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಿ ಉಡುಪಿ ದಸರಾ ಶಾರದೋತ್ಸವ ಭವ್ಯವಾಗಿ ಮುಕ್ತಾಯವಾಯಿತು.