ಕುಂದಾಪುರ, ಅ. 04 (DaijiworldNews/AA): ಮುನ್ನೆಚ್ಚರಿಕೆಯನ್ನು ಲೆಕ್ಕಿಸದೇ ಮರವಂತೆ ಬೀಚ್ಗೆ ಇಳಿದು ಮೋಜು ಮಸ್ತಿ ಮಾಡುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕರಾವಳಿ ನಿಯಂತ್ರಣ ದಳ (ಕೆಎನ್ಡಿ) ಸಿಬ್ಬಂದಿ ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಸಂಜೆಯ ವೇಳೆಗೆ ಬೆಂಗಳೂರಿನಿಂದ ಐದಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವು ವಿಹಾರಕ್ಕಾಗಿ ಮರವಂತೆ ಕಡಲತೀರಕ್ಕೆ ಆಗಮಿಸಿತ್ತು. ಇಲ್ಲಿನ ಮಾರಸ್ವಾಮಿ ದೇವಸ್ಥಾನದ ಎದುರಿನ ಬೀಚ್ ಬಳಿ ಮಸ್ತಿ ಮಾಡಲು ಸಮುದ್ರಕ್ಕೆ ಇಳಿಸಿದ್ದಾರೆ. ಈ ಪ್ರದೇಶದಲ್ಲಿ ಕಡಲಿಗೆ ಇಳಿದು ನೀರಿನಲ್ಲಿ ಆಟವಾಡುವುದು ನಿಷೇಧವಿದ್ದರೂ, ನಿರ್ಲಕ್ಷ್ಯ ಮಾಡಿದ್ದಾರೆ.
ಕೆಲ ಸಮಯ ನೀರಿನಲ್ಲಿ ಆಟವಾಡುತ್ತಿದ್ದ ಈ ತಂಡದಲ್ಲಿದ್ದ ಇಬ್ಬರು ಸ್ವಲ್ಪ ದೂರ ಅಲೆಯಬ್ಬರಕ್ಕೆ ಸಿಲುಕಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಕೂಡಲೇ ಸಮೀಪದಲ್ಲಿದ್ದ ಕರಾವಳಿ ನಿಯಂತ್ರಣ ದಳ ಸಿಬ್ಬಂದಿಗಳಾದ ನಿಶಾಂತ್ ಮತ್ತು ವಿಷ್ಣು ಅವರು ಸ್ಥಳಕ್ಕೆ ಧಾವಿಸಿ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಈ ಇಬ್ಬರನ್ನು ರಕ್ಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಒಬ್ಬರು ಸಮುದ್ರದೊಳಗೆ ಸುಮಾರು 100 ಮೀಟರ್ಗಳಷ್ಟು ದೂರ ಕೊಚ್ಚಿ ಹೋಗಿದ್ದರು ಎನ್ನಲಾಗಿದೆ. ಅವರನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.
ಘಟನೆಯ ನಂತರ, ಕರಾವಳಿ ಭದ್ರತಾ ಪೊಲೀಸ್ ಎಎಸ್ಐ ಮಂಜುನಾಥ್, ಸಿಬ್ಬಂದಿ ಸವಿತಾ ಮತ್ತು ರಾಘವೇಂದ್ರ, ಗಂಗೊಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪವನ್ ನಾಯಕ್ ಮತ್ತು ಹೆದ್ದಾರಿ ಗಸ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.