ಮಂಗಳೂರು, ಅ. 03 (DaijiworldNews/TA): ಪುತ್ತೂರಿನಲ್ಲಿನ ವಂಚನೆ ಕೇಸ್ ವಿಚಾರವಾಗಿ, ಯುವತಿಗೆ ಜನಿಸಿದ ಮಗು ಸ್ಥಳೀಯ ನಿವಾಸಿ ಕೃಷ್ಣ ರಾವ್ ಎಂಬಾತನದ್ದೇ ಎಂದು ಡಿಎನ್ ಎ ಪರೀಕ್ಷೆಯಲ್ಲಿ ರುಜುವಾತುಗೊಂಡ ಹಿನ್ನೆಲೆಯಲ್ಲಿ ಆತ ಮಗುವಿನ ತಾಯಿಯನ್ನು ಇನ್ನಾದರೂ ವಿವಾಹ ಆಗಲೇಬೇಕು. ತಪ್ಪಿದಲ್ಲಿ ಆತನ ಮನೆಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸುವುದಾಗಿ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣರಾವ್ ಒಪ್ಪಿದಲ್ಲಿ ಆತನ ಜೊತೆ ಯುವತಿಯ ವಿವಾಹವನ್ನು ನಾನೇ ಸ್ವಂತ ಖರ್ಚಿನಲ್ಲಿ ಮಾಡಿಸುತ್ತೇನೆ. ಪ್ರೀತಿ ಹೆಸರಲ್ಲಿ ಲೈಂಗಿಕ ಚಟುವಟಿಕೆ ನಡೆಸಿ, ಬಳಿಕ ಅರ್ಧದಲ್ಲೇ ಕೈಬಿಡುವ ಘಟನೆಗಳು ಮರುಕಳಿಸಬಾರದು. ಇದೊಂದು ಜಿಲ್ಲೆಗೆ ಕಪ್ಪು ಚುಕ್ಕೆ, ಹಾಗಾಗಿ ಈ ಘಟನೆ ಪ್ರೀತಿಸಿ, ಮಗು ಕರುಣಿಸಿ ಯುವತಿಯ ಬಾಳನ್ನು ಅರ್ಧಕ್ಕೇ ಕೈಬಿಡುವವರಿಗೆ ಒಂದು ಪಾಠವಾಗಬೇಕು ಎಂದು ಹೇಳಿದರು.
ಯುವತಿ ಜೊತೆ ಎಂಟು ವರ್ಷಗಳಿಂದ ಸಂಪರ್ಕದಲ್ಲಿದ್ದ ಕೃಷ್ಣ ರಾವ್, ಕೊನೆಗೆ ವಿವಾಹವಾಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ. ಆತನ ಮನೆಯವರೂ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಇವರಿಬ್ಬರನ್ನು ಒಂದುಗೂಡಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ಹಿಂದುತ್ವ ಸಂಘಟನೆಗಳು, ಸ್ವಯಂಘೋಷಿತ ಮುಖಂಡರು ಕೈಚೆಲ್ಲುತ್ತಿರುವುದು ಸರಿಯಲ್ಲ. ಸಂತ್ರಸ್ತೆಯನ್ನು ಸಮುದಾಯ ಸಂಘಟನೆಯವರು ಕೈಬಿಟ್ಟಿದ್ದಾರೆ. ಹಾಗಿರುವಾಗ ಕೇವಲ ಸಮುದಾಯದ ಮುಖಂಡ ನಂಜುಂಡಿ ಮಾತ್ರ ಧೈರ್ಯ ತುಂಬಿ ಬೆಂಬಲಕ್ಕೆ ನಿಂತಿದ್ದಾರೆ. ಈ ಘಟನೆಯಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂಬುವುದಾಗಿ ಪ್ರತಿಭಾ ಕುಳಾಯಿ ಹೇಳಿಕೆ ನೀಡಿದರು.
ಜಾಮೀನಿನಲ್ಲಿರುವ ಕೃಷ್ಣ ರಾವ್ ಕೋರ್ಟ್ ನಲ್ಲಿ ವಿಚಾರಣೆ ವೇಳೆ ನೀಡುವ ಹೇಳಿಕೆಯನ್ನು ಆಧರಿಸಿ ಮುಂದೆ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು. ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂಬುವುದಾಗಿ ಪ್ರತಿಭಾ ಕುಳಾಯಿ
ಹೇಳಿದರು. ಹಿಂದೂಗಳು ಹತ್ತು ಹತ್ತು ಮಕ್ಕಳನ್ನು ಹೆರುವಂತೆ ಭಾಷಣ ಮಾಡುವ ಹಿಂದುತ್ವ ಮುಖಂಡರು ಇದೀಗ ಹಿಂದೂ ಯುವಕನೊಬ್ಬ ಹಿಂದೂ ಯುವತಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಮಾತನಾಡುತ್ತಿಲ್ಲ. ಅನ್ಯಾಯಕ್ಕೊಳಗಾದ ಯುವತಿಗೆ ನ್ಯಾಯ ದೊರಕಿಸುತ್ತಿಲ್ಲ ಎಂದು ಆಕ್ಷೇಪಿಸಿದ ಪ್ರತಿಭಾ ಕುಳಾಯಿ, ಯಾವುದೇ ತಪ್ಪು ಮಾಡದ ಆ ಮಗುವಿನ ಭವಿಷ್ಯದ ಬಗ್ಗೆ ಆಲೋಚಿಸಬೇಕಾಗಿದೆ ಎಂದರು. ಸಂತ್ರಸ್ತೆಯ ತಾಯಿ ನಮಿತಾ, ಸಮುದಾಯದ ಕಾರ್ಯಕರ್ತೆ ಅರ್ಚನಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.