ಬಂಟ್ವಾಳ, ಅ.01 (DaijiworldNews/TA): ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ 50 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಗಾಂಧೀ ಜಯಂತಿ ಪ್ರಯುಕ್ತ ಆಹ್ವಾನಿತ ವಿದ್ಯಾರ್ಥಿಗಳಿಗೆ ಗಾಂಧೀಜಿ ಬದುಕು ಆಧರಿಸಿದ ರಸ ಪ್ರಶ್ನೆ ಕಾರ್ಯಕ್ರಮವನ್ನು ಅಕ್ಟೋಬರ್ 02 ರಂದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಬಂಟ್ವಾಳ ಘಟಕದ ಅಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.

ಮೆಲ್ಕಾರ್ ನ ಘಟಕದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಬಂಟ್ವಾಳ ಘಟಕವೂ 1988 ರಲ್ಲಿ ಸ್ಥಾಪನೆಯಾಗಿದ್ದು, ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರತಿವರ್ಷ ಶೈಕ್ಷಣಿಕ ಪ್ರೇರಣೆ ನೀಡುತ್ತಾ ಬಂದಿದೆ. ಹೆಣ್ಣು ಮಕ್ಕಳ ಶಿಕ್ಷಣ ಜಾಗೃತಿ, ಶಾಲೆ ಬಿಟ್ಟ ಮಕ್ಕಳಿಗೆ ಮರಳಿ ಬಾ ಶಾಲೆಗೆ ಕಾರ್ಯಕ್ರಮ , ಸರ್ವ ಶಿಕ್ಷಣ ಅಭಿಯಾನ ದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರ, ವರದಕ್ಷಿಣೆ ವಿರುದ್ಧ ಜಾಗೃತಿಯಂತಹಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಬಂಟ್ವಾಳ ಘಟಕವು 1988 ರಿಂದಲೂ ನಿರಂತರವಾಗಿ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುತ್ತಾಬಂದಿದ್ದು, ಈ ಬಾರಿ ವಿದ್ಯಾರ್ಥಿ ವೇತನದ ಜೊತೆಯಲ್ಲಿ ತರಬೇತಿ ಕಾರ್ಯಾಗಾರ, ಸಾಧಕ ವಿದ್ಯಾರ್ಥಿನಿಯರಾದ ಸಜ್ಲ ಇಸ್ಮಾಯಿಲ್ ಹಾಗೂ ಫಾತಿಮತ್ ಅಬೀರ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ನೂತನ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ವಿದ್ಯಾರ್ಥಿ ವೇತನ ವಿತರಿಸುವರು. ಅತಿಥಿಗಳಾಗಿ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ, ಸಂಸ್ಥೆಯ ಅಜೀವ ಸದಸ್ಯರಾದ ಆರಿಫ್ ಕೆ., ಬಿ.ಕೆ.ಅಬ್ದುಲ್ಲಾ ಕುಂಞಿ ಹಾಜಿ ಬೈರಿಕಟ್ಟೆ, ಝುಬೈರ್ ಬುಳೇರಿಕಟ್ಟೆ, ಮಂಗಳೂರು ಎ.ಜೆ.ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯರಾದ ಡಾ. ಹಸೀನಾ ಭಾಗವಹಿಸುವರು. ಉಪನ್ಯಾಸಕ ಹಾಗೂ ರಾಜ್ಯ ಮಟ್ಟದ ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿ ಹಕೀಂ ಕಲಾಯಿ, ಕೋಶಾಧಿಕಾರಿ ಲತೀಫ್ ನೇರಳಕಟ್ಟೆ , ಪೂರ್ವಾದ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಉಪಸ್ಥಿತರಿದ್ದರು.