ಮಂಗಳೂರು, ಅ.01 (DaijiworldNews/TA): ನವರಾತ್ರಿ, ಒಂಭತ್ತು ದೇವಿ ರೂಪಕಗಳ ಪವಿತ್ರ ಪೂಜೆಯ ಮಹತ್ತರ ಆಚರಣೆ. ನವದೇವಿಯರ ಆರಾಧನೆ ನಂತರ ಕೊನೆಗೆ ವಿಜಯದ ಸಂಕೇತವಾಗಿ ವಿಜಯದಶಮಿ ಆಚರಣೆ ಕೂಡ ರೂಡಿಯಲ್ಲಿದೆ. ಮಹಿಷನ ಸಂಹಾರಕ್ಕಾಗಿ ಅವತರಿಸೋ ದುರ್ಗೆಯ ಅವತಾರಗಳ ಐತಿಹ್ಯವೇ ಅದ್ಭುತ. ಈ ಆರಾಧನೆಯ ಹಿಂದೊಂದು ಅಚ್ಚಳಿಯದ ಕಥೆ ಇದೆ.

ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ಸಿದ್ಧಿದಾ ಸಿದ್ಧಿದಾಯಿನೀ ||
ಬಲಗೈಯಲ್ಲಿ ಗದೆ ಮತ್ತು ಚಕ್ರ, ಎಡಗೈಯಲ್ಲಿ ಶಂಖ ಮತ್ತು ಕಮಲ, ಅರಳಿದ ಕಮಲದಲ್ಲಿ ಆಸೀನಳಾಗಿರುವ ಅವತಾರವೇ, ಆಧ್ಯಾತ್ಮಿಕ ಆನಂದ ಹುಡುಕುವವರ ಪಾಲಿನ ಮಹಾಮಾತೆ ಸಿದ್ಧಿದಾತ್ರಿ ದೇವಿ. ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತೆ. ಅಷ್ಟೇ ಅಲ್ಲದೆ ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ ಎಂಬುವುದು ಉಲ್ಲೇಖ.
ಒಂಭತ್ತನೇ ದಿನದ ಆರಾಧ್ಯ ದೇವಿಯ ಹೆಸರಲ್ಲೊಂದು ಆಧ್ಯಾತ್ಮದ ಅರ್ಥ ಇದೆ. ಹಿಂದೂ ಪುರಾಣಗಳ ಪ್ರಕಾರ, ಸಿದ್ಧಿದಾತ್ರಿಯು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುವ ದೇವತೆ ಎಂದು ಕರೆಯಲಾಗುತ್ತೆ. ಸಿದ್ಧಿಯು 'ಬಯಕೆ'ಯನ್ನು ಸೂಚಿಸುತ್ತದೆ ಮತ್ತು ದಾತ್ರಿಯು 'ಒದಗಿಸುವವಳು' ಎಂಬುದನ್ನು ಸೂಚಿಸುತ್ತೆ. ಈ ಎರಡು ಶಬ್ಧವನ್ನು ಸಂಯೋಜಿಸಿ ಸಿದ್ಧಿದಾತ್ರಿ ಎಂಬ ಪದ ರೂಪುಗೊಂಡಿದೆ. ಮಾತೆ ಸಿದ್ಧಿದಾತ್ರಿಯು ತನ್ನ ಆಶೀರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ಧಿಗಳನ್ನು ನೀಡಿದಳು ಎಂದು ಪುರಾಣದಲ್ಲಿ ಉಲ್ಲೇಖವೂ ಇದೆ.
ಹೆಸರೇ ಸೂಚಿಸುವಂತೆ ಸಿದ್ಧಿಯನ್ನು ಅನುಗ್ರಹಿಸುವವಳು ಆ ಮಹಾ ತಾಯಿ ಸಿದ್ಧಿದಾತ್ರಿ. ಮಹಾಮಾತೆಯು ಮಹಾಶಿವನಿಗೂ ಮಹಾಶಕ್ತಿ. ಅರ್ಧನಾರೀಶ್ವರನ ರೂಪದ ಹಿಂದೆಯೂ ಸಿದ್ದಿದಾತ್ರಿಯ ಕೃಪೆ ಇದೆ. ಮಾರ್ಕಂಡೇಯ ಪುರಾಣದ ಪ್ರಕಾರವಾಗಿ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಎಂಟು ಸಿದ್ಧಿಗಳನ್ನು ಹೇಳಲಾಗಿದೆ. ಸಿದ್ದಿದಾತ್ರಿ ಕಥಾನಕದಲ್ಲಿ ಎಂಟು ಸಿದ್ದಿಗಳು ಪ್ರಮುಖವಾಗಿವೆ. ದೇವಿಪುರಾಣದಲ್ಲಿನ ಉಲ್ಲೇಖದ ಪ್ರಕಾರ, ಆ ಮಹಾಶಿವನಿಗೆ ಇವಳ ಕೃಪೆಯಿಂದಲೇ ಈ ಎಲ್ಲ ಸಿದ್ಧಿಗಳು ದೊರೆತಿತ್ತು. ಭಗವಾನ್ ಶಿವನು ದೇವಿಯನ್ನು ಸಮರ್ಪಣೆಯೊಂದಿಗೆ ಪೂಜಿಸುತ್ತಿರುತ್ತಾನೆ. ಕಾರಣ ಅವನ ದೇಹದ ಅರ್ಧಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಗುತ್ತೆ. ಇವಳ ಅನುಗ್ರಹದಿಂದಲೇ ಶಿವನ ಅರ್ಧ ಶರೀರವು ದೇವಿಯದಾಗಿತ್ತು. ಆದ್ದರಿಂದಲೇ ಶಿವನು ಜಗತ್ತಿನಲ್ಲಿ ‘ಅರ್ಧನಾರೀಶ್ವರ’ ಎಂಬ ಹೆಸರಿನಿಂದ ಪ್ರಖ್ಯಾತನಾದ, ಆದರ್ಶನಾದ ಎಂಬುವುದು ಉಲ್ಲೇಖ.
ಇದುವರೆಗೆ ನಾವು ಪರ್ವತ ರಾಜನ ಪುತ್ರಿ ಶೈಲಪುತ್ರಿಯ ಕಥೆ, ತಪಸ್ಸು ಮಾಡುತ್ತಿರುವ ಕನ್ಯೆ ಬ್ರಹ್ಮಚಾರಿಣಿ, ಚಂದ್ರದ ಆಕಾರದ ಗಂಟೆ ಶಿರದಲ್ಲಿ ಹೊತ್ತ ಚಂದ್ರಘಂಟಾ ಕಥೆ, ಬ್ರಹ್ಮಾಂಡ ರಚಿಸಿದ ಶಕ್ತಿ ಕೂಷ್ಮಾಂಡಾ ದೇವಿ, ಕುಮಾರಸ್ವಾಮಿಯ ತಾಯಿ ಸ್ಕಂದಮಾತೆ, ತಪಸ್ಸಿನಿಂದ ಜನಿಸಿದ ಶಕ್ತಿಶಾಲಿ ದೇವಿ ಕಾತ್ಯಾಯನಿ , ಅಂಧಕಾರವನ್ನೇ ನಾಶಮಾಡುವ ದೇವಿ ಕಾಲರಾತ್ರಿ, ಶುಚಿತ್ವದ ಹಾಗೂ ಶಾಂತಿಯ ರೂಪ ಮಹಾಗೌರಿ, ಸಿದ್ಧಿಗಳನ್ನು ನೀಡುವ ಪರಮ ಶಕ್ತಿ ಸಿದ್ಧಿದಾತ್ರೀ.
ಸಿದ್ಧಿದಾತ್ರಿಯ ಅನುಗ್ರಹದಿಂದ, ಚಿಂತೆ, ಆತಂಕ ಮತ್ತು ಭಯದಂತಹ ಜೀವನದ ಅಡೆತಡೆಗಳನ್ನು ಸಹ ತೊಡೆದುಹಾಕಬಹುದು ಎಂಬುವುದು ನಂಬಿಕೆ. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ, ಪುರಾಣದ ಸೌಂದರ್ಯದ ಮೆಲುಕು.
ಯಾ ದೇವಿ ಸರ್ವಭೂತೇಷು ಮಾ ಸಿಧ್ದಿದಾತ್ರಿ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
- ತಾರಾನವೀನ್ ಶೆಟ್ಟಿ ವರ್ಕಾಡಿ