ಬೆಳ್ತಂಗಡಿ, ಸೆ. 30 (DaijiworldNews/AA): ನೆರಿಯ ಪೆಟ್ರೋನೆಟ್ ಪೈಪ್ ಲೈನ್ ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ನಿವಾಸಿ ತಮ್ಮಯ್ಯ(35) ಬಂಧಿತ ಆರೋಪಿ. ಆರೋಪಿಯನ್ನು ಬಂಧಿಸಿದ ಪೊಲೀಸರು ಆತನನ್ನು ಸೆ.29 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಸೆ.28 ರಂದು ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವನನ್ನು ನೋಡಿ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ್ ಅವರು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ಆರೋಪಿಯು ತಾನು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಬಿದ್ರೆ ನಿವಾಸಿ ಎಂದು ತಿಳಿಸಿದ್ದು, ಅದರಂತೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ ವಿಚಾರಿಸಿದಾಗ ವಾರಂಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ತಮ್ಮಯ್ಯ ಎಂದು ತಿಳಿದುಬಂದಿದೆ.