ಉಡುಪಿ, ಸೆ. 30 (DaijiworldNews/AA): ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಸಾರಿಗೆ ಸೇವೆಗಳನ್ನು ಒದಗಿಸುತ್ತಿದ್ದ ಎಕೆಎಂಎಸ್ ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಅಲಿಯಾಸ್ ಸೈಫ್ (52) ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ. ಈ ಹಿಂದೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈಗ ವಿಚಾರಣೆಗಾಗಿ ಇನ್ನೂ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಮಂಗಳೂರಿನ ಮೊಹಮ್ಮದ್ ಶರೀಫ್ (37) ಮತ್ತು ಅಬ್ದುಲ್ ಶುಕುರ್ (43) ಅವರು 2020ರಲ್ಲಿ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಸಿಷ್ಠ ಕೊಲೆ ಪ್ರಕರಣದಲ್ಲಿ ಹಾಗೂ ಈಗ ಕೊಲೆಯಾದ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಮೂರನೇ ಆರೋಪಿ ಮೊಹಮ್ಮದ್ ಫೈಝಲ್ ಖಾನ್ (27) ಸೈಫುದ್ದೀನ್ ಅವರ ಆಪ್ತರಾಗಿದ್ದು, ಅವರ ಎಲ್ಲಾ ಬಸ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು ಮತ್ತು ಅವರ ವಿಶ್ವಾಸಾರ್ಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕೊಲೆಯ ಮೊದಲು ಫೈಝಲ್ ಖಾನ್ ಅವರು ಸೈಫುದ್ದೀನ್ ಅವರನ್ನು ಮಣಿಪಾಲದಲ್ಲಿರುವ ಅವರ ಮನೆಯಿಂದ ಕಾರಿನಲ್ಲಿ ಕೊಡವೂರಿನ ಮತ್ತೊಂದು ಮನೆಗೆ ಕರೆದೊಯ್ದಿದ್ದರು. ಇವರೊಂದಿಗೆ ಇನ್ನುಳಿದ ಇಬ್ಬರು ಆರೋಪಿಗಳು ಸಹ ಜೊತೆಯಲ್ಲಿದ್ದರು. ಸಾಲ್ಮರ ನಾಗಬನದ ಬಳಿಯಿರುವ ಮನೆಯೊಂದನ್ನು ಸೈಫುದ್ದೀನ್ ಪ್ರವೇಶಿಸುತ್ತಿದ್ದಂತೆಯೇ, ಈ ಮೂವರು ಸೇರಿ ಕಬ್ಬಿಣದ ರಾಡ್ಗಳು ಮತ್ತು ಕತ್ತಿಗಳಿಂದ ಅವರ ಮೇಲೆ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಶಂಕರ್ ಹೇಳಿದ್ದಾರೆ.
ಎಕೆಎಂಎಸ್ ಬಸ್ಗಳ ಮಾಲೀಕರಾಗಿದ್ದ ಸೈಫುದ್ದೀನ್ ಅವರು ಉಡುಪಿ ಮತ್ತು ಹಿರಿಯಡ್ಕ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿದ್ದರು. ಅವರ ವಿರುದ್ಧ ಎರಡು ಕೊಲೆ ಪ್ರಕರಣಗಳು ಸೇರಿದಂತೆ 18ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈ ಮೂವರು ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಿದ್ದಾರೆಯೇ ಅಥವಾ ಬೇರೆಯವರ ಪ್ರಚೋದನೆಯ ಮೇರೆಗೆ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕೊಲೆಯು ಆಕಸ್ಮಿಕವಾಗಿ ನಡೆದ ಕೋಪದ ಕೃತ್ಯವಲ್ಲ, ಬದಲಾಗಿ ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಆರೋಪಿಗಳು ಮಣಿಪಾಲದಲ್ಲಿರುವ ಸೈಫುದ್ದೀನ್ ಅವರ ಮನೆಗೆ ಮೊದಲೇ ಬಂದು ಅವರಿಗಾಗಿ ಕಾಯುತ್ತಾ, ಅಲ್ಲಿಂದ ಒಂದು ಮನೆಗೆ ಕರೆದೊಯ್ದು ನಂತರ ಮತ್ತೊಂದು ಮನೆಗೆ ಕರೆಸಿ ಹತ್ಯೆಗೈದಿದ್ದಾರೆ. ಆರೋಪಿಗಳಿಗೆ ಆರ್ಥಿಕ ನೆರವು ಸಿಕ್ಕಿದೆಯೇ ಅಥವಾ ದಾಳಿ ನಡೆಸಲು ಬೇರೆಯವರಿಂದ ಸುಪಾರಿ ಪಡೆದಿದ್ದಾರೆಯೇ ಎಂಬ ಕುರಿತು ಕೂಡ ತನಿಖೆ ನಡೆಯುತ್ತಿದೆ.
ಈ ಕೊಲೆಯ ಬಗ್ಗೆ ಕೆಲವು ಸ್ವಹಿತಾಸಕ್ತಿ ಗುಂಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪರಿಶೀಲಿಸದ ಮಾಹಿತಿಯನ್ನು ಹರಡುತ್ತಿದ್ದು, ಇದು ಕೋಮು ಸೌಹಾರ್ದತೆಗೆ ಭಂಗ ತರಬಹುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಅಥವಾ ಹರಡಬಾರದು. ಪೊಲೀಸರು ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತಿದ್ದಾರೆ ಎಂದು ಅವರು ಭರವಸೆ ನೀಡಿದ್ದಾರೆ.