ಬೈಂದೂರು, ಸೆ. 29 (DaijiworldNews/AA): ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆಪ್ಟೆಂಬರ್ 26ರ ರಾತ್ರಿ ಭಕ್ತರೊಬ್ಬರ ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿದ್ದ ಮಹಿಳೆಯನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆರೋಪಿಯನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಯಾದವ ದುರ್ಗಮ್ಮ ಎಂದು ಗುರುತಿಸಲಾಗಿದೆ.
ಘಟನೆ ನಡೆದ 24 ಗಂಟೆಗಳೊಳಗೆ ಪೊಲೀಸರು ಆಕೆಯನ್ನು ಬಂಧಿಸಿದ್ದು, ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದೇವಸ್ಥಾನಕ್ಕೆ ಬಂದಿದ್ದ ಯಾತ್ರಾರ್ಥಿ ದೇವಿಪ್ರಿಯಾ ಎಂಬುವವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ತಮ್ಮ ಬ್ಯಾಗ್ನಲ್ಲಿದ್ದ 3 ಪವನ್ (ಸುಮಾರು 24 ಗ್ರಾಂ), 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳುವಾಗಿದೆ ಎಂದು ದೂರು ಸಲ್ಲಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ನೆರವಿನ ಮೂಲಕ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಕಳುವಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡ ಪೊಲೀಸರು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಪಿಎಸ್ಐ ಹೆಚ್. ಡಿ. ಕುಲಕರ್ಣಿ ಮತ್ತು ವೃತ್ತ ನಿರೀಕ್ಷಕ ನೀಲೇಶ್ ಚೌಹಾಣ್ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಅವರ ನೇತೃತ್ವದಲ್ಲಿ, ಪಿಎಸ್ಐ ಸುಧಾರಾಣಿ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.