ಕಾಪು, ಸೆ. 20 (DaijiworldNews/AA): ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಏಳು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಗರುಡ ಗ್ಯಾಂಗ್ ಸದಸ್ಯನೊಬ್ಬನನ್ನು ಕಾಪು ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕುಂದಾಪುರ ಮುಸ್ಲಿಂ ಕೇರಿಯ ನಿವಾಸಿ ಮೊಹಮ್ಮದ್ ಆಸಿಫ್ (35) ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. 2025ರ ಫೆಬ್ರವರಿ ಇಂದ ಆರೋಪಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ತಾನು ನೀಡಿದ್ದ ವಿಳಾಸದಲ್ಲಿರದೆ ತಲೆಮರೆಸಿಕೊಂಡಿದ್ದನು.
ಕಾಪು ಪೊಲೀಸ್ ಠಾಣೆ ಮಾತ್ರವಲ್ಲದೆ, ಗಂಗೊಳ್ಳಿ ಠಾಣೆಯಲ್ಲಿ ನಾಲ್ಕು ಪ್ರಕರಣಗಳು, ಬೈಂದೂರು, ಕಂಕನಾಡಿ (ಮಂಗಳೂರು) ಮತ್ತು ಉಪ್ಪಿನಂಗಡಿ ಠಾಣೆಗಳಲ್ಲಿ ತಲಾ ಎರಡು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ.
ಸೆಪ್ಟೆಂಬರ್ 18ರಂದು ಕಾಪು ಪೊಲೀಸ್ ಸಿಬ್ಬಂದಿಗಳಾದ ಮೊಹಮ್ಮದ್ ರಫೀಕ್, ಮೋಹನ್ ಚಂದ್ರ ಮತ್ತು ಗಣೇಶ್ ಶೆಟ್ಟಿ ಅವರು ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ಆಸಿಫ್ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಯನ್ನು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅಕ್ಟೋಬರ್ 16ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನ್ಯಾಯಾಲಯದ ಆದೇಶದಂತೆ ಆತನನ್ನು ಹಿರಿಯಡ್ಕ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.