ಬೆಳ್ತಂಗಡಿ, ಸೆ. 20 (DaijiworldNews/AA): ಕೊಯ್ಯೂರು ಗ್ರಾಮದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

2024ರ ಡಿಸೆಂಬರ್ 9 ರಂದು ಕೊಯ್ಯೂರು ಗ್ರಾಮದಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಉಮೇಶ್ ಗೌಡ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದನು. ಈ ಸಂಬಂಧ ಆರೋಪಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಅದೇ ದಿನ ಬಂಧಿಸಲಾಗಿತ್ತು.
ಪಿಎಸ್ಐ ಮುರಳೀಧರ್ ನಾಯಕ್ ಸ್ಥಳ ಮಹಜರು ನಡೆಸಿದರೆ, ಎಎಸ್ಐ ಕುಲಜ್ಯೋತಿ ತಿಲಕ್ ತನಿಖೆಗೆ ನೆರವಾಗಿದ್ದರು. ನ್ಯಾಯಾಲಯದ ಸಿಬ್ಬಂದಿ ಸತೀಶ್ ಬಿ.ಆರ್. ಅವರು ಸಹ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮೂಲಕ ಸಹಕರಿಸಿದ್ದಾರೆ.
ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಸುಬ್ಬಾಪುರ್ ಮಠ್ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಂದೇಶ್ ಅವರು ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ, 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಆರು ತಿಂಗಳ ಕಾರಾಗೃಹ ವಾಸ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಸಹಾಯಕ ಸಹಕಾರಿ ಅಭಿಯೋಜಕರಾಗಿ ಆಶಿತಾ ರವರು ವಾದಿಸಿರುತ್ತಾರೆ.