ಉಡುಪಿ, ಸೆ. 19 (DaijiworldNews/AA): ಲಿಂಗಾಯತ ಧರ್ಮವು ಹಿಂದೂ ಅಥವಾ ಸನಾತನ ಧರ್ಮದ ಭಾಗವಲ್ಲ. ಸಮಾಜದಲ್ಲಿ ಪ್ರಚಲಿತವಿದ್ದ ಜಾತಿ ಮತ್ತು ವರ್ಣ ತಾರತಮ್ಯದ ವಿರುದ್ಧ ಹುಟ್ಟಿಕೊಂಡ ಧರ್ಮವಿದು. ಲಿಂಗಾಯತ ಸ್ವತಂತ್ರ ಧರ್ಮ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಹೇಳಿದ್ದಾರೆ.




ಲಿಂಗಾಯತ ಮಠಾಧೀಶರ ಒಕ್ಕೂಟದ ವತಿಯಿಂದ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಉಡುಪಿ ಟೌನ್ ಹಾಲ್ನಲ್ಲಿ ಸೆಪ್ಟೆಂಬರ್ 18 ರಂದು ನಡೆದ 'ಬಸವ ಸಂಸ್ಕೃತಿ ಅಭಿಯಾನ'ದ ಭಾಗವಾಗಿ ಆಯೋಜಿಸಿದ್ದ ವಚನ ಚಿಂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ. ಬಸವಲಿಂಗ ಪಟ್ಟದೇವರು ಅವರು, "ಲಿಂಗಾಯತ ಒಂದು ಜಾತಿಯಲ್ಲ, ಅದೊಂದು ಸಂಪೂರ್ಣ ಧರ್ಮ. ಧರ್ಮ ಒಂದು, ಜಾತಿ ಇನ್ನೊಂದು. ಜಾತಿ ಕತ್ತಲೆಯಿದ್ದಂತೆ, ಧರ್ಮ ಬೆಳಕಿದ್ದಂತೆ. ಜಾತಿಯ ಕತ್ತಲೆಯನ್ನು ಹೋಗಲಾಡಿಸಲು ಧರ್ಮದ ಬೆಳಕು ಅವಶ್ಯಕ" ಎಂದರು.
ಹಂದಿಗುಂದ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, "ಸಿಖ್, ಜೈನ ಮತ್ತು ಇತರ ಅಲ್ಪಸಂಖ್ಯಾತ ಧರ್ಮಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡಿರುವಂತೆ, ನಾವು ಸಹ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಒತ್ತಾಯಿಸುತ್ತಿದ್ದೇವೆ. ಇದು ಪ್ರತಿಭಟನೆಯಲ್ಲ, ನಮ್ಮ ಹಕ್ಕು. ಲಿಂಗಾಯತರು ಹಿಂದೂಗಳೂ ಅಲ್ಲ ಸನಾತನ ಧರ್ಮದವರೂ ಅಲ್ಲ. ಲಿಂಗಾಯತರು ಸ್ವತಂತ್ರ ಧರ್ಮದವರು. ಬಸವಣ್ಣ ನಮ್ಮ ಧರ್ಮಗುರು. ವಚನ ಸಾಹಿತ್ಯ ನಮ್ಮ ಧರ್ಮಗ್ರಂಥ. ಬಸವಣ್ಣನವರು ಕೊಟ್ಟ ಬಸವ ಧರ್ಮ ಅಥವಾ ಲಿಂಗಾಯತ ಧರ್ಮವು ಬೇರೆ ಯಾವುದೇ ಧರ್ಮಕ್ಕೆ ಸೇರಿಲ್ಲ" ಎಂದು ಹೇಳಿದರು.
ಬೆಳಗಾವಿಯ ಸೀಗುಣಿಸೆ ಡಾ. ಮಹಾಂತ ಪ್ರಭು ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.
ಈ ಕಾರ್ಯಕ್ರಮದಲ್ಲಿ ಹುಲಸೂರು ಶ್ರೀಮಠದ ಶ್ರೀ ಶಿವಾನಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ನವಲಗುಂದ ಗವಿಮಠ ಧಾರವಾಡದ ಶ್ರೀ ಬಸವಲಿಂಗ ಸ್ವಾಮೀಜಿ, ಕಲಬುರಗಿ ಷಣ್ಮುಖ ಶಿವಯೋಗಿ ಮಠದ ವೀರಸಿದ್ಧದೇವರು, ರಾಯಚೂರಿನ ವೀರಭದ್ರ ಶಾಸ್ತ್ರಿ, ಬೆಳಗಾವಿಯ ಶಿವಬಸವ ದೇವರು, ಬಸವಕಲ್ಯಾಣದ ಬಸವರಾಜ ದೇವರು ಮತ್ತು ಮಮ್ಮಿಗಟ್ಟಿಯ ಬಸವಾನಂದ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಡಾ. ಜಿ.ಎಸ್. ಚಂದ್ರಶೇಖರ್, ಶರಣ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನಿರಂಜನ್ ಚೋಳಯ್ಯ, ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ದಲಿತ ಸಂಘರ್ಷ ಸಮಿತಿ ಮುಖಂಡ ಸುಂದರ್ ಮಾಸ್ಟರ್, ಬಿಲ್ಲವ ಮುಖಂಡೆ ಗೀತಾಂಜಲಿ ಸುವರ್ಣ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.