ಬಂಟ್ವಾಳ, ಸೆ. 19 (DaijiworldNews/AA): ಸಹಕಾರಿ ಸಂಘಗಳು ಗ್ರಾಹಕರಲ್ಲಿ ವಿಶ್ವಾಸವನ್ನು ಮೂಡಿಸಿ ಕೆಲಸ ನಿರ್ವಹಿಸಿದರೆ ಯಶಸ್ಸು ಕಾಣಲು ಸಾಧ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದರು.


ಮಂಚಿಯ ಲಯನ್ಸ್ ಮಂದಿರದಲ್ಲಿ ನಡೆದ ಶ್ರೀ ಲಕ್ಷ್ಮೀನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ದಶಮ ಸಂಭ್ರಮದಲ್ಲಿ ಆಶೀರ್ವಚನ ನೀಡಿದ ಅವರು, "ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಬಾಂಧವ್ಯ ವೃದ್ಧಿ ಅತ್ಯಂತ ಪ್ರಮುಖವಾದದ್ದು. ಗ್ರಾಹಕರಿಗೆ ಸಂಸ್ಥೆ ಮೇಲೆ ವಿಶ್ವಾಸ ಮೂಡಿದರೆ ಸಂಬಂಧ ವೃದ್ಧಿಯಾಗುತ್ತದೆ, ತಮ್ಮ ಗಳಿಕೆ ಒಂದಂಶವನ್ನು ಸಮಾಜಕ್ಕೆ ನೀಡಬೇಕೆನ್ನುವ ಸಂಕಲ್ಪವನ್ನು ಸಹಕಾರಿ ತತ್ವ ಪ್ರೇರಣೆಯಾಗಿದೆ" ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, "ದಶಮ ಸಂಭ್ರಮದ ವಿಶೇಷ ಠೇವಣಿಪತ್ರ ವಿತರಿಸಿ ಮಾತನಾಡಿ, ಸಹಕಾರ ಸಂಘಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಅವಶ್ಯಕತೆಗಳಿಗೆ ನೆರವಾಗುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಸಹಕಾರ ಸಂಘಗಳ ಮೇಲೆ ಸ್ಥಳೀಯರು ಹೆಚ್ಚು ಒಲವು ಹೊಂದಿರುವುದು ಇದಕ್ಕೆ ಸಾಕ್ಷಿ" ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ವಹಿಸಿ ಸಂಘದ ಹತ್ತು ವರ್ಷಗಳ ಸಾಧನೆಯನ್ನು ವಿವರಿಸಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲೊಟ್ಟು ಶುಭಹಾರೈಸಿದರು.
ವ್ಯಾಪಾರಸ್ಥರಾದ ಜೆಫ್ರಿ ಲೂಯಿಸ್, ರಾಮಕೃಷ್ಣ ನಾಯಕ್ ಕೋಕಳ, ಅಬ್ದುಲ್ ರಹಿಮಾನ್, ಸಂಘ ಉಪಾಧ್ಯಕ್ಷ ಭಾಸ್ಕರ ಕುಲಾಲ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿರುಮಲೇಶ ಕೆ, ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು. ಮಹಾಲಿಂಗ ಭಟ್ ಬಿಲ್ಲಂಪದವು ಕಾರ್ಯಕ್ರಮ ನಿರ್ವಹಿಸಿದರು.