ಉಡುಪಿ, ಸೆ. 19 (DaijiworldNews/AA): ಕಾರಿನಲ್ಲಿ ಮೂರು ಗಂಡು ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ಬಂಧಿಸಿ, ಕರುಗಳನ್ನು ರಕ್ಷಿಸಿದ್ದಾರೆ.

ಕಂಡ್ಲೂರು ನಿವಾಸಿ, ಕಾರು ಚಾಲಕ ಶಾಹೀದ್ ಕರಾಣಿ ಮತ್ತು ಆತನಿಗೆ ಮಾರ್ಗದರ್ಶನ ನೀಡಲು ಬೈಕ್ನಲ್ಲಿ ಸಾಗುತ್ತಿದ್ದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.
ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯಿಂದ ದನಗಳನ್ನು ಮಾಂಸಕ್ಕಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಅಶೋಕ್ ಕುಮಾರ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ನಡಂಬೂರು ಕ್ರಾಸ್ ಬಳಿ ಕಾರನ್ನು ತಡೆಯಲು ಯತ್ನಿಸಿದಾಗ, ಚಾಲಕ ವೇಗವಾಗಿ ಕಾರನ್ನು ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಪೊಲೀಸರು ಕಾರನ್ನು ಬೆನ್ನಟ್ಟಿ ಬಸ್ರೂರು ಬಳಿ ವಾಹನವನ್ನು ತಡೆದಾಗ, ಅದರೊಳಗೆ ಮೂರು ಗಂಡು ಕರುಗಳು ಇರುವುದು ಪತ್ತೆಯಾಗಿದೆ.
ಆರೋಪಿ ಚಾಲಕ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಿಗೆ ಮಾರ್ಗದರ್ಶನ ನೀಡುತ್ತಿದ್ದ ಬೈಕ್ ಸವಾರನನ್ನೂ ವಶಕ್ಕೆ ಪಡೆಯಲಾಗಿದ್ದು, ಆತ ಅಪ್ರಾಪ್ತ ಬಾಲಕ ಎಂದು ತಿಳಿದುಬಂದಿದೆ. ಆತನನ್ನು ನಿಟ್ಟೂರಿನ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ. ಆತ ಚಲಾಯಿಸುತ್ತಿದ್ದ ಬೈಕನ್ನೂ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಕಾರು ಮತ್ತು ಬೈಕ್ನ ಅಂದಾಜು ಮೌಲ್ಯ 6.25 ಲಕ್ಷ ರೂ. ಆಗಿದ್ದು, ಮೂರು ಗಂಡು ಕರುಗಳ ಮೌಲ್ಯ 5,000 ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.