ಮಂಗಳೂರು, ಸೆ. 19(DaijiworldNews/TA): ಮುಲ್ಕಿ ಹಳೆಯಂಗಡಿ ಸಮೀಪದ ಪಾವಂಜೆ ನಿವಾಸಿ ಖ್ಯಾತ ಸಂಶೋಧಕ, ಸಾಹಿತಿ, ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವ (88) ಅವರು ಬುಧವಾರ ರಾತ್ರಿ ಬೆಂಗಳೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು.

ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರೊ. ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ)ರವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಕೆನರಾದ ರಾಜಕೀಯ ಇತಿಹಾಸ : 1565-1763 ಎನ್ನುವ ವಿಷಯದ ಮೇಲೆ ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದರು. ಮುಲ್ಕಿ ವಿಜಯಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ 32 ವರ್ಷ ಕರ್ತವ್ಯ ನಿರ್ವಹಿಸಿದ ವಸಂತ ಮಾಧವರು, ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್ರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಇಪ್ಪತ್ತರಷ್ಟು ಇತಿಹಾಸ ಕೃತಿಗಳನ್ನು ಮತ್ತು ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ವಸಂತ ಮಾಧವರ ಕುರಿತಾದ ಕೃತಿಯನ್ನು ಡಾ. ಎಸ್. ಪದ್ಮನಾಭ ಭಟ್ಟರು ರಚಿಸಿದ್ದು ನಾಡಿಗೆ ನಮಸ್ಕಾರ ಗ್ರಂಥಮಾಲೆಯಡಿ ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ.