ಬಂಟ್ವಾಳ, ಸೆ. 15 (DaijiworldNews/AA): ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯು ಪುರಸಭಾ ಅಧ್ಯಕ್ಷ ವಾಸು ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.


ಸಾಮಾನ್ಯ ಸಭೆಯಲ್ಲಿ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಒಂದೇ ಒಂದು ಕಾನೂನು ಪ್ರಕಾರ ದಾಖಲೆಗಳು ಸಿಗುತ್ತಿಲ್ಲ. ಪುರಸಭೆಯ ಸದಸ್ಯರುಗಳಿಗೆ ಮರ್ಯಾದೆ ಇಲ್ಲವೇ? ನಾವೇನು ಕೆಲಸವಿಲ್ಲದೆ ಬಂದು ಇಲ್ಲಿ ಕುಳಿತುಕೊಂಡಿದ್ದೇವಾ? ಎಂದು ಅಧಿಕಾರಿಗಳಿಗೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಪ್ರಶ್ನಿಸಿದರು.
ಪುರಸಭೆ ಒಂದೇ ಕಾನೂನು ಮಾತ್ರ ಎರಡು ಇದು ಯಾವ ನ್ಯಾಯ ಇಲ್ಲಿ ಬೇಕಾದಂತೆ ಕಾನೂನುಗಳು ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಆರೋಪ ವ್ಯಕ್ತಪಡಿಸಿದರು.
ಪಾಣೆಮಂಗಳೂರು ಹಳೆಯ ಸೇತುವೆಯ ಅಭಿವೃದ್ಧಿ ಪಡಿಸುವ ಕೆಲಸ ಪುರಸಭೆಯಿಂದ ಆಗಬೇಕು. ಇತ್ತೀಚಿಗೆ ಸಾಮರ್ಥ್ಯ ಪರೀಕ್ಷೆ ನಡೆಸಿದ ಬಳಿಕ ಅದರ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಕನಿಷ್ಠ ಪಕ್ಷ ಸೇತುವೆ ಸುತ್ತ ಸ್ವಚ್ಛಗೊಳಿಸುವ ಕೆಲಸ ಕೂಡ ಮಾಡಿಲ್ಲ ಎಂದು ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ತಿಳಿಸಿದರು.
ಬ್ರಿಟಿಷ್ ಕಾಲದ ಉಕ್ಕಿನ ಸೇತುವೆಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಇದರ ದುರಸ್ತಿಯ ಬಗ್ಗೆ ಪುರಸಭೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸದಸ್ಯರುಗಳು ಹೇಳಿದರು.
ಘನತ್ಯಾಜ್ಯ ವಾಹನವೊಂದಕ್ಕೆ ಓರ್ವ ಡ್ರೈವರನ್ನು ನಿಯೋಜಿಸಿ ಆತನಿಗೆ ಫೆ.ಯಿಂದ ಜೂನ್ ವರೆಗೆ 94614 ರೂ ವೇತನ ಪಾವತಿ ಮಾಡಿದ ಬಗ್ಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪುರಸಭೆಯ ಘನತ್ಯಾಜ್ಯ ವಿಲೇವಾರಿ ವಾಹನಗಳಿಗೆ ಅಧಿಕೃತವಾಗಿರುವ 8 ಜನರಿಗೆ ವೇತನ ಪಾವತಿ ಅಲ್ಲದೆ, ಇನ್ನೊಂದು ಚಾಲಕನನ್ನು ಅನಧಿಕೃತವಾಗಿ ಪುರಸಭೆಗೆ ನೇಮಕ ಮಾಡಿದ್ದು ಹೇಗೆ? ಮತ್ತು ಆತನಿಗೆ ಸಂಬಳ ನೀಡಿರುವ ಕ್ರಮ ಸರಿಯಾ ಎಂದು ಪ್ರಶ್ನಿಸಿದ ಸದಸ್ಯರು ವಿರೋಧ ಬರೆಯುವಂತೆ ಪಟ್ಟು ಹಿಡಿದರು.
ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಅಮೃತಯೋಜನೆಯಡಿ ಪೈಪ್ ಲೈನ್ ಹಾಕಲಾಗಿದೆ, ಆದರೆ ನೀರು ಬರುತ್ತಿಲ್ಲ. ಇದೀಗ ಮನೆಯ ಮಾಲೀಕರ ಆಧಾರ್ ಕಾರ್ಡ್ ಪಡೆದುಕೊಂಡು ಸಾವಿರಾರು ರೂ. ಬಿಲ್ ನೀಡಿ ಹೋಗುತ್ತಾರೆ. ಬಿಲ್ ಕಟ್ಟಿದವರಿಗೆ ಕುಡಿಯುವ ನೀರು ಇಲ್ಲ, ಬಿಲ್ ಕಟ್ಟದವರಿಗೆ ನೀರು ಹೋಗುತ್ತದೆ ಎಂದು ಆರೋಪ ಮಾಡಿದರು. ಜೊತೆಗೆ ಬಿಲ್ ಕಟ್ಟದಿದ್ದರೆ ನಿಮ್ಮ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಹೆದರಿಸುವ ಕೆಲಸ ಪುರಸಭೆಯಿಂದ ಆಗುತ್ತಿದೆ ಅಂದರೆ ಏನರ್ಥ ಎಂದು ಕೇಳಿದರು.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪುರಸಭಾ ವ್ಯಾಪ್ತಿಯ ನಿವಾಸಿಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆ ಮಾಡುವು ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗದೆ ಇರುವುದಕ್ಕೆ ಇರುವ ಕಾರಣಗಳು ಯಾವುದು ಎಂಬುದು ಗೊತ್ತಾಗುತ್ತಿಲ್ಲ, ಹಾಗಾಗಿ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಣಯ ಮಾಡುವಂತೆ ಪುರಸಭಾ ಅಧ್ಯಕ್ಷ ವಾಸುಪೂಜಾರಿ ಸೂಚನೆ ನೀಡಿದರು. ಈ ಮೂಲಕ ಕುಡಿಯುವ ನೀರಿನ ಯೋಜನೆಯಲ್ಲಿ ಆಗಿರುವ ಅವ್ಯವಹಾರಗಳನ್ನು ಬಯಲಿಗೆ ತರುವ ಕಾರ್ಯ ಆಗಲಿ ಎಂದು ತಿಳಿಸಿದರು.
ಕಂಚಿನಡ್ಕ ಪದವು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪುರಸಭೆಯ ತ್ಯಾಜ್ಯವಲ್ಲದೆ ಬೇರೆಬೇರೆ ಗ್ರಾ.ಪಂ.ನ ಕಸಗಳನ್ನು ತಂದು ಹಾಕುತ್ತಾರೆ ಎಂಬ ದೂರುಗಳಿವೆ. ಇದಕ್ಕೆ ಪುರಸಭೆ ಅವಕಾಶ ನೀಡಿದೆಯಾ? ಪುರಸಭೆಯ ತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶದಿಂದ ನಿರ್ಮಿಸಿದ ಘಟಕದಲ್ಲಿ ಹೊರಗಿನವರ ತ್ಯಾಜ್ಯವನ್ನು ಯಾಕೆ ಡಂಪ್ ಮಾಡಲು ಅವಕಾಶ ನೀಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿರೋಡಿನ ಆಡಳಿತ ಸೌಧದ ಕಚೇರಿ ಮುಂಭಾಗದಲ್ಲಿ ಪಿಂಕ್ ಟಾಯ್ಲೆಟ್ ನನ್ನು ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಮಾಡಿಕೊಡಿ, ಕನಿಷ್ಠ ದರವನ್ನು ನಿಗದಿಪಡಿಸಿ ಎಂದು ಸದಸ್ಯರು ತಿಳಿಸಿದರು. ಇದರ ಜೊತೆ ಪಾಣೆಮಂಗಳೂರು ಪೇಟೆಯಲ್ಲಿ ನಿರ್ಮಿಸಿದ ಶೌಚಾಲಯವನ್ನು ಓಪನ್ ಮಾಡಿ, ಇಲ್ಲದಿದ್ದರೆ ನಾವೇ ಓಪನ್ ಮಾಡುತ್ತೇವೆ ಎಂದು ಸದಸ್ಯರು ಹೇಳಿದರು.
ಸದಸ್ಯರುಗಳಾದ ಹರಿಪ್ರಸಾದ್, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು.