ಉಡುಪಿ, ಸೆ. 15 (DaijiworldNews/AA): ಬಹುನಿರೀಕ್ಷಿತ ಶ್ರೀ ಕೃಷ್ಣ ಲೀಲೋತ್ಸವ (ವಿಟ್ಲ ಪಿಂಡಿ ಮಹೋತ್ಸವ) ಸೋಮವಾರ ಉಡುಪಿಯಲ್ಲಿ ಅದ್ಧೂರಿ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ದಿನ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಸಂಭ್ರಮಿಸಿದರು.





























ಸೌರಮಾನ ಪಂಚಾಂಗದ ಪ್ರಕಾರ ಭಾನುವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಧ್ಯರಾತ್ರಿ ಸಾಂಪ್ರದಾಯಿಕ ಅರ್ಘ್ಯ ಪ್ರಧಾನ ವಿಧಿವಿಧಾನದ ನಂತರ ಹಬ್ಬದ ಆಚರಣೆಗಳು ಪ್ರಾರಂಭವಾದವು. ಸರಿಯಾಗಿ 12:11 ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ಕೃಷ್ಣನಿಗೆ ಅರ್ಘ್ಯವನ್ನು ಅರ್ಪಿಸಿದರು. ನಂತರ ಪವಿತ್ರ ತುಳಸಿ ಕಟ್ಟೆಯ ಮುಂದೆ ಚಂದ್ರನಿಗೆ ಅರ್ಘ್ಯ ಅರ್ಪಿಸಿದರು. ಸಾವಿರಾರು ಭಕ್ತರು ಈ ಅರ್ಘ್ಯ ಪ್ರಧಾನದಲ್ಲಿ ಪಾಲ್ಗೊಂಡರು. ಬಳಿಕ ವಿಟ್ಲ ಪಿಂಡಿ ಉತ್ಸವಕ್ಕೆ ಭರ್ಜರಿ ಚಾಲನೆ ನೀಡಲಾಯಿತು.
ಉಡುಪಿ ಅಷ್ಟಮಿಯ ಪ್ರಮುಖ ಆಕರ್ಷಣೆಯಾದ ವಿಟ್ಲ ಪಿಂಡಿ ಮಹೋತ್ಸವದಂದು, ಸಾಂಪ್ರದಾಯಿಕ ಸಿಹಿ ಖಾದ್ಯವಾದ ಹಾಲು ಪಾಯಸವನ್ನು ನೀಡಿ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಚಿನ್ನದ ರಥದಲ್ಲಿ ಶ್ರೀ ಕೃಷ್ಣನ ಮಣ್ಣಿನ ವಿಗ್ರಹವನ್ನು ಇರಿಸಿ, ಅದಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಸಾಂಪ್ರದಾಯಿಕವಾಗಿ ಉಡುಗೆ ತೊಟ್ಟ ಗೋಪಾಲರು ಕೃಷ್ಣನ ಬಾಲ್ಯದ ಚೇಷ್ಟೆಗಳನ್ನು ಪ್ರತಿನಿಧಿಸುವ ಹಳೆಯ ಸಂಪ್ರದಾಯವನ್ನು ನೆನಪಿಸುವ ಹಾಗೆ ಎತ್ತರದಲ್ಲಿ ಕಟ್ಟಿದ ಮೊಸರು ತುಂಬಿದ ಮಡಿಕೆಗಳನ್ನು ಒಡೆದರು. ವಿಟ್ಲ ಪಿಂಡಿ ಮಹೋತ್ಸವದ ಭಾಗವಾಗಿ ನಡೆದ ಕಡಗೋಲು ಕೃಷ್ಣನ ಉತ್ಸಾಹಭರಿತ ಮೆರವಣಿಗೆ ನೆರೆದಿದ್ದ ಭಕ್ತರಿಗೆ ಒಂದು ಅದ್ಭುತ ನೋಟವನ್ನು ಸೃಷ್ಟಿಸಿತು.
ದೇವಸ್ಥಾನದ ರಥಬೀದಿಯು ವರ್ಣರಂಜಿತ ಮೆರವಣಿಗೆಯಿಂದ ಜೀವಂತವಾಯಿತು. ಸಾಂಪ್ರದಾಯಿಕ ಜಾನಪದ ನೃತ್ಯಗಳು ಮತ್ತು ವೇಷಭೂಷಣಗಳಿಂದ ಹಿಡಿದು ಹುಲಿವೇಷದ ಪ್ರದರ್ಶನಗಳವರೆಗೆ, ರಸ್ತೆಗಳು ಸಂಗೀತ, ಜಯಕಾರ ಮತ್ತು ಭಕ್ತಿಯ ಸಂಭ್ರಮದಿಂದ ಮಾರ್ದನಿಸಿದವು. ಮುಂಬೈನ ಅಲಾರೆ ತಂಡವು ಗಾಳಿಯಲ್ಲಿ ಎತ್ತರದಲ್ಲಿ ಕಟ್ಟಿದ ಮಡಿಕೆಗಳನ್ನು ಒಡೆಯುವ ಮೂಲಕ ಸಾಹಸಮಯ ಕೌಶಲ್ಯಗಳನ್ನು ಪ್ರದರ್ಶಿಸಿತು, ಇದು ಬೆಳಗಿನ ಜಾವದಿಂದಲೇ ಭಕ್ತರನ್ನು ಮಂತ್ರಮುಗ್ಧಗೊಳಿಸಿತು.
ಲಕ್ಷಾಂತರ ಭಕ್ತರು ಈ ವಿಶಿಷ್ಟ ಆಚರಣೆಯನ್ನು ಕಣ್ತುಂಬಿಕೊಳ್ಳಲು ಉಡುಪಿಗೆ ಭೇಟಿ ನೀಡಿದರು, ಈ ಆಚರಣೆಗಳು ಶ್ರೀ ಕೃಷ್ಣನ ಮಣ್ಣಿನ ವಿಗ್ರಹದ ಜಲಸ್ತಂಭನದೊಂದಿಗೆ (ವಿಸರ್ಜನೆ) ಕೊನೆಗೊಂಡಿತು. ಈ ವರ್ಷದ 48 ದಿನಗಳ ಮಂಡಲ ಉತ್ಸವವು ಆಚರಣೆಗಳಿಗೆ ಮತ್ತಷ್ಟು ಭವ್ಯತೆ ಮತ್ತು ಆಧ್ಯಾತ್ಮಿಕ ವೈಭವವನ್ನು ನೀಡಿತು.