ಉಡುಪಿ, ಸೆ. 15 (DaijiworldNews/AA): ಸಾರ್ವಜನಿಕರ ನಿರಂತರ ಬೇಡಿಕೆಯ ನಂತರ ಕೆಳ ಪರ್ಕಳದಲ್ಲಿ ರಸ್ತೆ ದುರಸ್ತಿ ಕಾರ್ಯ ಅಂತಿಮವಾಗಿ ಆರಂಭವಾಗಿದೆ.




ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ರಸ್ತೆ ದುರಸ್ತಿಪಡಿಸುವಂತೆ ಮತ್ತು ಸೆಪ್ಟೆಂಬರ್ 15, ಸೋಮವಾರದಿಂದಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದರು. ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಸೆಪ್ಟೆಂಬರ್ 15ರಿಂದ ರಸ್ತೆ ದುರಸ್ತಿ ಕಾಮಗಾರಿ ಆರಂಭಗೊಂಡಿದೆ.
ಮೊದಲ ದಿನ, ಗುತ್ತಿಗೆದಾರರು ಕೆಳ ಪರ್ಕಳದ ಬಳಿ ಕಾಮಗಾರಿ ಆರಂಭಿಸಿದ್ದಾರೆ. ರಸ್ತೆ ಡಾಂಬರೀಕರಣ ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್ 16ರಿಂದ ಕೇವಲ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿರುತ್ತದೆ. ಕಾರ್ಕಳ - ಹೆಬ್ರಿ - ಶಿವಮೊಗ್ಗ ಕಡೆಗೆ ಸಂಚರಿಸುವ ಎಲ್ಲ ವಾಹನಗಳನ್ನು ಈಶ್ವರನಗರ - ಸರಳೇಬೆಟ್ಟು - ಪರ್ಕಳ ಮಾರ್ಕೆಟ್ ಕಡೆಗೆ ತಿರುಗಿಸಿ ಪರ್ಕಳ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರಿಕೊಳ್ಳುವಂತೆ ಮಾರ್ಗ ಬದಲಿಸಲಾಗಿದೆ.
ಪರ್ಕಳದಲ್ಲಿ ರಸ್ತೆ ದುರಸ್ತಿ ಕಾರ್ಯವು ಸೆಪ್ಟೆಂಬರ್ 22ರ ವರೆಗೆ ಮುಂದುವರಿಯಲಿದ್ದು, ಈ ಸಮಯದಲ್ಲಿ ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿರುತ್ತದೆ.