ಕಾರ್ಕಳ, ಸೆ. 12 (DaijiworldNews/AA): ಸೂಪರ್ವೈಸರ್ ಎಂದು ಪರಿಚಯಿಸಿಕೊಂಡು ಮಹಿಳೆಯೊಬ್ಬರ ಚಿನ್ನದ ಸರ ಕಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸವದತ್ತಿಯ ಸುನಿಲ್ ರಮೇಶ್ ಲಮಾಣಿ (29) ಎಂದು ಗುರುತಿಸಲಾಗಿದೆ. ಆತನಿಂದ ಕದ್ದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೆ. 9ರ ಸಂಜೆ 4:30ರ ಸುಮಾರಿಗೆ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಕುಮುದಾ ಶೆಟ್ಟಿ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿದ್ದ. ಆತ ಕಾರ್ಕಳದಿಂದ ಬಂದ ಸೂಪರ್ವೈಸರ್ ಎಂದು ಪರಿಚಯಿಸಿಕೊಂಡು, ಸಮೀಪದಲ್ಲಿ ಮನೆಯನ್ನು ಹೊಂದಿದ್ದೀರಾ ಮತ್ತು ನಿಮ್ಮ ನಿವಾಸದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇವೆಯೇ ಎಂದು ಕೇಳಿದ್ದಾನೆ. ನಂತರ ಸ್ವಲ್ಪ ಹೊತ್ತು ಅಲ್ಲೇ ಇದ್ದು, ಕತ್ತಲಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಕುಮುದಾ ಅವರ ಕುತ್ತಿಗೆ ಹಿಡಿದು ಸುಮಾರು 25 ಗ್ರಾಂ ತೂಕದ ಸರವನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಸರ ಎಗರಿಸುವುದನ್ನು ತಡೆಯಲು ಪ್ರಯತ್ನಿಸುವಾಗ, ಕುಮುದಾ ಅವರು ನೆಲಕ್ಕೆ ಬಿದ್ದಿದ್ದು, ಹಣೆಯ, ತಲೆ, ಬಲಗೈ ಮತ್ತು ಕಾಲಿಗೆ ಗಾಯಗಳಾಗಿವೆ. ಕೂಡಲೇ ಸತೀಶ್ ಪೂಜಾರಿ ಕುಮುದಾ ಅವರನ್ನು ಕಾರ್ಕಳದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.
ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ಸಿಪಿಐ ಕಾರ್ಕಳ ಡಿ ಮಂಜಪ್ಪ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಯಿತು. ಅಜೆಕಾರು ಪಿಎಸ್ಐ ಮಹೇಶ್ ಮತ್ತು ಅವರ ಸಿಬ್ಬಂದಿ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ, ಕದ್ದ ಚಿನ್ನದ ಸರವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.