ಬಂಟ್ವಾಳ, ಸೆ. 10 (DaijiworldNews/ AK): ಮೂಲಭೂತ ಸೌಕರ್ಯಗಳ ಕೊರತೆಯಿಂದ ವಂಚಿತಗೊಂಡಿರುವ ಬಂಟ್ವಾಳದ ಬ್ರಹ್ಮರಕೋಟ್ಲು ಟೋಲ್ ಪ್ಲಾಜಾಕ್ಕೆ ಕಾಯಕಲ್ಪ ಒದಗಿಸಿ, ಇಲ್ಲವೇ ಬಂದ್ ಮಾಡಿ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.






ರಾಷ್ಟ್ರೀಯ ಹೆದ್ದಾರಿ 75 ರ ಬ್ರಹ್ಮರಕೋಟ್ಲು ಎಂಬಲ್ಲಿ ಟೋಲ್ ಪ್ಲಾಜಾ ಇದ್ದು, ಇದರ ನಿರ್ಮಾಣವಾದಂದಿನಿಂದ ಏನಾದರೊಂದು ಕಿರಿಕ್ ಮೂಲಕ ಕುಖ್ಯಾತ ಪಡೆದಿದೆ. ಇಲ್ಲಿ ಯಾವುದೇ ಸೂಕ್ತ ವ್ಯವಸ್ಥೆಗಳು ಕೂಡ ಇಲ್ಲ. ಇಷ್ಟಕ್ಕೂ ವೈಜ್ಞಾನಿಕವಾಗಿ ಟೋಲ್ ಪ್ಲಾಜಾ ನಿರ್ಮಾಣಕ್ಕೆ ಸೂಕ್ತವಲ್ಲದ ಕಿರಿದಾದ ರಸ್ತೆಯ ಮೇಲೆ ಟೋಲ್ ಸಂಗ್ರಹದ ಯೋಜನೆ ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.
ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಲ್ಲಿ ಅಂಗಲಾಚುವಂತೆ ಆಗಿದೆ. ಟೋಲ್ ಪ್ಲಾಜಾದ ಬಳಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು,ಗುಂಡಿಗೆ ಬಿದ್ದ ವಾಹನಗಳು ಟೋಲ್ ನೀಡಿ ಬಳಿಕ ಗ್ಯಾರೇಜ್ ನತ್ತ ಮುಖ ಮಾಡಬೇಕಾದ ಸ್ಥಿತಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಂಗಳೂರು ರಸ್ತೆ ಅಪಘಾತದಲ್ಲಿ ಅವಘಡಗಳು ಸಂಭವಿಸಿದ ಮೇಲೆ ಇಲ್ಲಿನ ಟೋಲ್ ಸಂಗ್ರಹ ಕೇಂದ್ರದ ಅವ್ಯವಸ್ಥೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕತ್ತಲಲ್ಲಿ ಟೋಲ್ ಸಂಗ್ರಹ ಮಾಡುವ ರಾಜ್ಯದ ಪ್ರಥಮ ಟೋಲ್ ಸಂಗ್ರಹ ಕೇಂದ್ರವಾಗಿರಬಹುದು ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ. ಇಲ್ಲಿ ಬೀದಿ ದೀಪವಿಲ್ಲದೆ ಸುತ್ತ ಕಗ್ಗತ್ತಲು ಆವರಿಸಿದೆ.
ಟೋಲ್ ಸಂಗ್ರಹ ಮಾಡುವ ಕೇಂದ್ರದಲ್ಲಿ ಒಂದೋ ಎರಡೋ ಸಣ್ಣ ಚಿಮಿಣಿ ದೀಪಗಳು ಉರಿಯುತ್ತಿವೆ. ಈ ಚಿಮಿಣಿಯಂತಹ ದೀಪದಲ್ಲಿ ಬಡ ಕಾರ್ಮಿಕರು ಯಾವ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಾರೋ ಅನ್ನುವುದು ತಿಳಿಯದು. ದೂರದಲ್ಲಿ ಬರುವ ವಾಹನಗಳಿಗೆ ಇಲ್ಲಿ ಟೋಲ್ ಬೂತ್ ಇದೆ ಎಂಬುದನ್ನು ತಿಳಿಯಲು ದಾರಿ ದೀಪಗಳೆ ಇಲ್ಲ. ದಾರಿ ದೀಪ ಅಳವಡಿಕೆಗೆ ವಿದ್ಯುತ್ ಕಂಬದ ಗುಂಡಿ ತೆಗೆದು ಹೋದ ಕೆಲಸಗಾರರು ಮತ್ತೆ ಪತ್ತೆಯಿಲ್ಲ, ಇಂದು ನಾಳೆ ಎಂಬ ಭರವಸೆಯ ಮಾತುಗಳಿಗೆ ಬಾಯಿಗೆ ಬೀಗ ಹಾಕಿ ಕುಳಿತುಕೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಕೇಂದ್ರದ ಸುತ್ತಲೂ ರಸ್ತೆ ಬದಿಯಲ್ಲಿ ಪೊದೆಗಳು, ಗಿಡಗಂಟಿಗಳು ತುಂಬಿದ್ದು, ರಸ್ತೆಯನ್ನು ಆಕ್ರಮಿಸಿವೆ. ಪ್ರವಾಸಿಗರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯವಾಗಿ ಇರಬೇಕಾದ ಟಾಯ್ಲೆಟ್ ವ್ಯವಸ್ಥೆ ಇಲ್ಲವೇ ಇಲ್ಲ. ರಾಜಸ್ಥಾನ ಮೂಲದ ಕಂಪನಿಯೊಂದು ಟೋಲ್ ಪ್ಲಾಜಾವನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ.
ವರ್ಷಕ್ಕೆ ಸುಮಾರು 19 ಕೋಟಿ ರೂಪಾಯಿ ಹಣವನ್ನು ಇಲಾಖೆಗೆ ಗುತ್ತಿಗೆ ವಹಿಸಿಕೊಂಡ ಕಂಪನಿ ಕಟ್ಟಬೇಕಾಗಿದೆ. ಹೀಗಾಗಿ ದಿನವೊಂದಕ್ಕೆ ರೂ.5.50 ಲಕ್ಷ ಕಲೆಕ್ಷನ್ ಆಗಬೇಕಾಗಿದೆ. ಮಳೆಗಾಲ ಮತ್ತು ಘನಗಾತ್ರದ ಲಾರಿಗಳ ಓಡಾಟ ಕಡಿಮೆ ಇರುವುದರಿಂದ ಹೆಚ್ಚು ಕಮ್ಮಿ 4 ರಿಂದ 5 ಲಕ್ಷ ವರೆಗೆ ಟೋಲ್ ಸಂಗ್ರಹವಾಗುತ್ತಿದ್ದು, ಸದ್ಯ ಕಂಪೆನಿ ನಷ್ಟದಿಂದ ನಡೆಸಿಕೊಂಡು ಹೋಗುತ್ತಿದೆ ಎಂದು ಸಿಬ್ಬಂದಿ ಮೂಲಗಳು ತಿಳಿಸಿವೆ.
ಸ್ಥಳೀಯ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಸೂಕ್ತವಾದ ರೀತಿಯಲ್ಲಿ ಸರ್ವೀಸ್ ರಸ್ತೆಯ ಕೆಲಸ ಮಾಡಿಕೊಡಿ ಜೊತೆಗೆ ಚರಂಡಿ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.