ಮಂಗಳೂರು, ಸೆ. 11 (DaijiworldNews/TA): ದ.ಕ. ಜಿಲ್ಲೆಯಲ್ಲಿ ಸರಣಿಯ ಹತ್ಯೆಗಳು ನಡೆದ ಬಳಿಕ ಪೊಲೀಸ್ ಅಧಿಕಾರಿಗಳು ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ ಕಾರಣದಿಂದಾಗಿ ಸದ್ಯ ಶಾಂತಿ ನೆಲೆಸಿದೆ. ಇದೀಗ ಆತಂಕ ದೂರವಾಗಿ ಜನರಿಗೆ ಶಾಂತಿ, ನೆಮ್ಮದಿಯ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಹೊಡಿ, ಬಡಿ, ಕಡಿ, ಕೋಮು ದ್ವೇಷದ ಭಾಷಣಕ್ಕೆ ಮಂಗಳೂರು ಪೊಲೀಸ್ ಆಯುಕ್ತರು ಮತ್ತು ದ.ಕ. ಜಿಲ್ಲಾ ಎಸ್ಪಿ ಕಡಿವಾಣ ಹಾಕಿದ್ದಾರೆ. ಕಾನೂನಿನ ಅನುಷ್ಠಾನ ಸಮರ್ಪಕವಾಗಿ ಆಗಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಪೂರೈಕೆ , ಮಟ್ಕಾ, ಸ್ಕಿಲ್ ಗೇಮ್, ಜುಗಾರಿ, ಇಸ್ಪೇಟ್ ಮತ್ತಿತರರ ಅಕ್ರಮ , ಕಾನೂನುಬಾಹಿರ ಚಟುವಟಿಕೆಗಳು ಬಂದ್ ಆಗಿವೆ. ಕಾನೂನು ಎಲ್ಲರಿಗೂ ಒಂದೇ. ಆದರೆ ಅನುಷ್ಠಾನದಲ್ಲಿ ಅಧಿಕಾರಿಗಳು ಎಡವಿದ ಹಿನ್ನೆಲೆಯಲ್ಲಿ ಹಿಂದೆ ಸಮಸ್ಯೆ ಆಗಿತ್ತು. ಈಗ ಎಲ್ಲಡೆ ಗಣೇಶೋತ್ಸವ ಶಾಂತಿಯುತವಾಗಿ ನಡೆದಿದೆ.
ಕಾರ್ಯಕ್ರಮಗಳಿಗೆ ಅನುಮತಿ ಪಡೆಯದವರಿಗೆ ಸ್ವಲ್ಪ ತೊಂದರೆ ಆಗಿದ್ದು ನಿಜ. ಡಿಜೆಗೆ ಅವಕಾಶ ನೀಡದಿರುವುದು ಸ್ವಾಗತಾರ್ಹ. ಆರೋಗ್ಯಕ್ಕೆ ಹಾನಿಕಾರವಾದ ಡಿಜೆಗೆ ಇನ್ನು ಮುಂದೆಯೂ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಧ್ವನಿವರ್ಧಕ, ಶಾಮಿಯಾನ, ಲೈಟಿಂಗ್ಸ್ ನವರಿಗೆ ತೊಂದರೆ ಆಗಿಲ್ಲ . ಸರಕಾರ ಕಾನೂನು ಮಾಡಿರುವುದನ್ನು ಅಧಿಕಾರಿಗಳು ಅನುಷ್ಠಾನ ಮಾಡಿದ್ದಾರೆ. ಏನಾದರೂ ಸಣ್ಣಪುಟ್ಟ ಲೋಪದೋಷಗಳು ಕಾಣಿಸಿಕೊಂಡಿದ್ದರೆ ಅವುಗಳನ್ನು ಸಂಬಂಧಪಟ್ಟವರನ್ನು ಕರೆಸಿ ಸಭೆ ನಡೆಸಿ ಸರಿಪಡಿಸುವ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.