ಮಂಗಳೂರು, ಸೆ. 11 (DaijiworldNews/TA): ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತ, ಬಲ್ಮಠ, ಮಂಗಳೂರು ತನ್ನ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುವರ್ಣ ಮಹೋತ್ಸವದ ಅಂಗವಾಗಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದೆ.

ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ಸೆಪ್ಟೆಂಬರ್ 21, 2025ರಂದು ಬೆಳಿಗ್ಗೆ 8.00ರಿಂದ ಮಧ್ಯಾಹ್ನ 12.30ರವರೆಗೆ ಜಪ್ಪು ಸೈಂಟ್ ಜೋಸೇಫ್ ಸೆಂಟಿನರಿ ಮೆಮೋರಿಯಲ್ ಹಾಲ್ನಲ್ಲಿ ಈ ಶಿಬಿರ ನಡೆಯಲಿದೆ. ಡಾ. ಕವಿತ ಡಿ'ಸೋಜ, ತಜ್ಞರು, ಪ್ರಸೂತಿ ಮತ್ತು ಹೆರಿಗೆ ವಿಭಾಗ, ಎ.ಜೆ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಅವರ ನೇತೃತ್ವದಲ್ಲಿ, ಹಾಗೂ ಎ.ಜೆ. ಕಣ್ಣಿನ ವಿಭಾಗದ ಸಹಕಾರದೊಂದಿಗೆ ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ನಡೆಯಲಿದೆ.
ಕಾರ್ಯಕ್ರಮವನ್ನು ಬೆಳಿಗ್ಗೆ 8.30ಕ್ಕೆ ಸಂಘದ ಅಧ್ಯಕ್ಷರಾದ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ.ಜೆ. ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 8.00ರಿಂದ ನೋಂದಣಿ ಪ್ರಾರಂಭವಾಗಲಿದ್ದು, ಆಗಮಿಸುವ ಪ್ರತಿಯೊಬ್ಬರಿಗೂ ನೋಂದಣಿ ಕಾರ್ಡ್ ನೀಡಲಾಗುವುದು. ನೋಂದಣಿಗೆ ಆಧಾರ್ ಕಾರ್ಡ್ ಅಗತ್ಯವಿದೆ. ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿವರ್ಗ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.