ಮಂಗಳೂರು, ಸೆ. 11 (DaijiworldNews/TA): ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೆ. 20 ರಿಂದಲೇ ಮಧ್ಯಾವಧಿ (ದಸರಾ ರಜೆ) ಆರಂಭವಾಗಲಿದೆ. ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ. 20 ರಿಂದ ದಸರಾ ರಜೆ ಆರಂಭಗೊಂಡು ಅಕ್ಟೋಬರ್ 6ರ ವರೆಗೂ ಇರಲಿದೆ. ಅ. 7ರಿಂದ ಶಾಲೆಗಳು ಪುನರ್ ಆರಂಭವಾಗಲಿದೆ.

ಅವಿಭಜಿತ ದ.ಕ. ಜಿಲ್ಲೆಯ ಸಿಬಿಎಸ್ಇ ಶಾಲೆಗಳಲ್ಲಿ ಸೆ. 20ರಿಂದ ಮಧ್ಯಾವಧಿ ರಜೆ ಆರಂಭವಾಗಿ ಅ. 2ರ ವರೆಗೂ ಇರಲಿದೆ. ಅ. 3ರಿಂದ ತರಗತಿಗಳು ಪುನಃ ಆರಂಭವಾಗಲಿದೆ. ಸಿಬಿಎಸ್ಇ ಕೆಲವು ಆಡಳಿತ ಮಂಡಳಿಗಳ ರಜಾವಧಿಯಲ್ಲಿ ಸ್ವಲ್ಪ ವ್ಯತ್ಯಾಸವೂ ಇರಬಹುದು. ದೀಪಾವಳಿ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚು ದಿನ ರಜಾ ಕೊಡುವ ಶಾಲೆಗಳು ಈ ರಜಾವಧಿಯ ಕಡಿಮೆ ಮಾಡಿಕೊಳ್ಳುವ ಪದ್ಧತಿಯೂ ಇದೆ.
ರಾಜ್ಯ ಪಠ್ಯಕ್ರಮ ಸಹಿತ ವಿವಿಧ ಪಠ್ಯಕ್ರಮದ ಕೆಲ ಶಾಲೆಗಳಲ್ಲಿ ಎಸೆಸೆಲ್ಸಿ/ ಫಲಿತಾಂಶ ಸುಧಾರಣೆಯ ದೃಷ್ಟಿಯಿಂದ ಆಯಾ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾವಧಿ ರಜಾವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸುವ ಸಾಧ್ಯತೆಯೂ ಇರುತ್ತದೆ. ವಿದ್ಯಾರ್ಥಿಗಳಿಗೆ ಅಥವಾ ವಿದ್ಯಾರ್ಥಿಗಳ ಪಾಲಕ, ಪೋಷಕರಿಗೆ ಯಾವುದೇ ಒತ್ತಡ ಆಗದ ರೀತಿಯಲ್ಲಿ ರಜಾವಧಿಯ ವಿಶೇಷ ತರಗತಿಗೆ ಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.