ಕಾಸರಗೋಡು, ಸೆ. 11 (DaijiworldNews/AK): ಪೆರ್ಲ ಪೇಟೆಯ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ಸುಮಾರು 8.30 ಗಂಟೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಮಣಿಯಂಪಾರೆ ನಿವಾಸಿಯಾದ ರಿಕ್ಷಾ ಚಾಲಕ ಶೇಣಿ ಬಾರೆದಳದ ನಾರಾಯಣ ಮೂಲ್ಯ (67) ಸಾವನ್ಬಪ್ಪಿದ್ದಾರೆ.

ಇವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಹಿಂದೆಯಿಂದ ಬಂದ ಕಾರೊಂದು ಡಿಕ್ಕಿಯಾಗಿತ್ತು. ರಿಕ್ಷಾದಲ್ಲಿದ್ದ ಸಹ ಪ್ರಯಾಣಿಕರಿಗೂ ತೀವ್ರ ಗಾಯಗಳಾಗಿದೆ. ಶೇಣಿ ಶಾಲಾ ಬಳಿ ರಿಕ್ಷಾ ಚಲಾಯಿಸುತ್ತಿದ್ದ ಇವರು ಮಣಿಯಂಪಾರೆ ನಿವಾಸಿಯಾದ ರೋಗಿಯೊಬ್ಬರನ್ನು ಪೆರ್ಲದ ಖಾಸಗೀ ಆಸ್ಪತ್ರೆಯೊಂದಕ್ಕೆ ಕರೆ ತಂದು ಹಿಂತಿರುಗುವ ವೇಳೆ ಈ ಅಪಘಾತ ನಡೆದಿದೆ.
ಕಾರು ಗುದ್ದಿದ ರಭಸಕ್ಕೆ ರಿಕ್ಷಾ ಮಗುಚಿ ಬಿದ್ದಿದ್ದು ತಲೆಗೆ ತೀವ್ರ ಗಾಯಗೊಂಡ ಇವರನ್ನು ತಕ್ಷಣ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲುಪಿಸುವ ನಡುವೆ ಪ್ರಾಣ ಕಳಕೊಂಡಿದ್ದಾರೆ. ಶೇಣಿ ಅಯ್ಯಪ್ಪ ಮಂದಿರದ ಸ್ಥಾಪಕರಲ್ಲಿ ಪ್ರಮುಖರಾಗಿದ್ದ ಇವರು ಗುರುಸ್ವಾಮಿಗಳಾಗಿ ಅಯ್ಯಪ್ಪ ಮಾಲಾಧಾರಣೆ ಮಾಡಿ ಪ್ರಧಾನ ಗುರುಸ್ವಾಮಿಗಳಾಗಿರುವುದಲ್ಲದೆ ಹಲವಾರು ಶಿಷ್ಯವೃಂದವನ್ನು ಹೊಂದಿದ್ದರು.
ಮೃತರು ಪತ್ನಿ ಗಿರಿಜಾ, ಮಕ್ಕಳಾದ ಯೋಗಿಶ, ಸುರೇಂದ್ರ,ಹರೀಶ, ಸೊಸೆಯಂದಿರಾದ ಶಾರದ, ಪುಷ್ಪಾ,ಗೀತಾ ಹಾಗೂ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನಗಲಿದ್ದಾರೆ.