ಬಂಟ್ವಾಳ,ಸೆ. 11 (DaijiworldNews/AK): "ಸರಕಾರಕ್ಕೆ ಮತಿಯಿಲ್ಲ- ಕಾರ್ಮಿಕರಿಗೆ ಗತಿಯಿಲ್ಲ !!!! " ಭವತಿ ಬಿಕ್ಷಾಂ ದೇಹಿ" ಎಂಬ ಸ್ಲೋಗನ್ ನಡಿ " ಬಡ ಕಾರ್ಮಿಕರ ಧ್ವನಿಯಾಗಿ " ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರರವರ ನೇತೃತ್ವದಲ್ಲಿ ಸೆ.11 ರಂದು ಗುರುವಾರ ಪುಂಜಾಲಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ರಾಜರಸ್ತೆಯ ಮೂಲಕ ಮಡಂತ್ಯಾರು ಪೇಟೆವರಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಬಳಿಕ ತಿರುಗಿ ಪುಂಜಾಲಕಟ್ಟೆ ಬಂದು ಪಿಲಾತಬೆಟ್ಟು ಗ್ರಾಮಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ ಕಳೆದ 5 ತಿಂಗಳಿನಿಂದ ದ.ಕ.ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಮರುಳು ಮತ್ತು ಕೆಂಪು ಕಲ್ಲು ಇಲ್ಲದೆ ಕಾರ್ಮಿಕರು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ. ಅದಕೋಸ್ಕರ "ಭವತಿ ಬಿಕ್ಷಾ ದೇಹಿ" ಎನ್ನುವ ಹೋರಾಟದ ಮೂಲಕ,ಸರಕಾರದ ಗಮನಕ್ಕೆ ತರುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ದ.ಕ.ಜಿಲ್ಲೆಯ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ಸವಾರಿ ಮಾಡುವ ಸರಕಾರಕ್ಕೆ ಉಳಿದ ಜಿಲ್ಲೆ ಕಾಣುವುದಿಲ್ಲವೇ? ಎಲ್ಲೂ ಇಲ್ಲದ ಕಾನೂನು ದ.ಕ.ಜಿಲ್ಲೆಗೆ ಮಾತ್ರನಾ? ಇದು ಯಾವ ನ್ಯಾಯ? ಎಂದು ಕಾಂಗ್ರೆಸ್ ಸರಕಾರದ ವಿರುದ್ದ ಹರಿಹಾಯ್ದರು. ದ.ಕ.ಜಿಲ್ಲೆಯ ಆರ್ಥಿಕ ವ್ಯವಸ್ಥೆ ನಿಂತಿರುವುದು ಧಾರ್ಮಿಕ ಆಚರಣೆಯ ಮೇಲೆ ಎಂಬುದು ಇಲ್ಲಿನ ಅಧಿಕಾರಿಗಳು ತಿಳಿದಿರಬೇಕು ಎಂದು ಹೇಳಿದರು.
ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಮಾತನಾಡಿ, ಭಾರತ ಅರ್ಥಿಕ ವ್ಯವಸ್ಥೆ 3 ನೇ ಸ್ಥಾನ ಹೊಂದಬೇಕಾದರೆ ಕೂಲಿ ಕಾರ್ಮಿಕರ ಬೆವರಿನ ಋಣ ಇದೆ ಎಂಬುದು ಮತಿಗೆಟ್ಟು ಸರಕಾರಕ್ಕೆಗೊತ್ತಿರಬೇಕು ಎಂದು ಹೇಳಿದರು.
ಬಡವನ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಸರಕಾರ ಮಾಡಿದರೆ ಆಡಳಿತ ಮಾಡುವವರ ಪಟ್ಟಕ್ಕೆ ಹೊಡೆಯುತ್ತೇವೆ ಇದು ಎಚ್ಚರಿಕೆಯ ಮಾತು ಎಂದು ಹೇಳಿದರು.
ಅರಕ್ಷಕ ಪಟ್ಟಕ್ಕೆ ಸರಕಾರ ರಾಕ್ಷಕ ಪಟ್ಟ ಕಟ್ಟಿದ್ದು ಕಾಂಗ್ರೇಸ್ ಸರಕಾರ ಎಂದು ಆರೋಪ ಮಾಡಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಮಾತನಾಡಿ, ಹೋರಾಟ ಯಾವುದಕ್ಕೆ ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಎ.ಸಿ.ರೂಮಿನಲ್ಲಿ ಕುಳಿತುಕೊಂಡು ಕಾನೂನು ತಯಾರಿಸುವ ಅಧಿಕಾರಿಗಳು, ಯಾವುದೇ ಕಾನೂನು ಪ್ರಯೋಗ ಮಾಡುವುದು ದ.ಕ.ಜಿಲ್ಲೆಗೆ ಮಾತ್ರನಿಮಗೆ ದ.ಕ.ಜಿಲ್ಲೆ ಪ್ರಯೋಗ ಶಾಲೆಯಾಗಿದ್ಯಾ ಎಂದು ಪ್ರಶ್ನಿಸಿದರು.
ದ.ಕ.ಜಿಲ್ಲೆಯ ಜನರು ದುಡಿದು ತಿನ್ನುವವರೇ ಹೊರತು ಬೇಡಿ ತಿನ್ನುವವರಲ್ಲ ಎಂಬುದು ಅಧಿಕಾರಿಗಳ ಗಮನದಲ್ಲಿ ಇರಲಿ ಎಂದು ಹೇಳಿದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಾ ಸಭೆ ಮುಕ್ತಾಯವಾಯಿತು.
ಜೋಯಲ್ ಮೆಂಡೋನ್ಸ್, ಹರೀಂದ್ರ ಪೈ,ಹರ್ಷಿಣಿಪುಷ್ಪಾನಂದ, ಪುರುಷೋತ್ತಮ ಶೆಟ್ಟಿ ವಾಮದಪದವು, ತಾರಾನಾಥ ಕಜೆಕಾರು,ಪಿ.ಎಂ.ಪ್ರಭಾಕರ,ಮಾದವ ಬಂಗೇರ,ಪ್ರಶಾಂತ್ ಪುಂಜಾಲಕಟ್ಟೆ, ಹನೀಫ್ ಪುಂಜಾಲಕಟ್ಟೆ, ಹರೀಶ್ ಪ್ರಭು, ಪುಷ್ಪಾನಂದ,ಶಾರದಾ, ಅಬ್ದುಲ್ ರಹಿಮಾನ್, ನಾರಾಯಣ ಪೂಜಾರಿ, ಸುಂದರ ನಾಯ್ಕ ,ರವಿಶಂಕರ ಹೊಳ್ಳ,ಶೇಖರ ಬದ್ಯಾರು, ಕಾಂತಪ್ಪ ಕರ್ಕೇರ,ದಯಾನಂದ ನಾಯ್ಕ , ಮೆಲ್ವಿನ್ ಕೊರ್ಯ, ಭವಾನಿ ಮಧ್ವ, ಬೇಬಿರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ , ಬೆಳ್ತಂಗಡಿ ಪೋಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ,ಪುಂಜಾಲಕಟ್ಟೆ ಎಸ್.ಐ.ರಾಜೇಶ್ ಕೆವಿ,ಸಿಕಂದರ್ ಪಾಷಾ,ವೇಣೂರು ಎಸ್.ಐ.ಶ್ರೀಶೈಲಾ, ನೇತ್ರತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಾಡು ಮಾಡಲಾಗಿತ್ತು.