ಮಂಗಳೂರು, ಸೆ. 10 (DaijiworldNews/AA): ಸರ್ಕ್ಯೂಟ್ ಹೌಸ್ ಬಳಿಯಿಂದ ಬಿಜೈ ರಸ್ತೆಗೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಸುಮಾರು ಎರಡು ತಿಂಗಳೇ ಕಳೆದರೂ, ಇನ್ನೂ ಸಂಪೂರ್ಣವಾಗಿ ತೆರವುಗೊಳಿಸಲಾಗಿಲ್ಲ.







ಜುಲೈ 16ರಂದು ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಘಟನೆ ನಡೆದ ಎರಡು ತಿಂಗಳ ನಂತರವೂ, ರಸ್ತೆ ಮತ್ತು ಪಾದಚಾರಿ ಮಾರ್ಗದ ಭಾಗಗಳಲ್ಲಿ ಮಣ್ಣು ಮತ್ತು ಅವಶೇಷಗಳು ಬಿದ್ದಿದ್ದು, ರಸ್ತೆಯನ್ನು ಬಂದ್ ಮಾಡಲಾಗಿದೆ.
ಪಾದಚಾರಿ ಮಾರ್ಗವನ್ನು ಬಂದ್ ಮಾಡಿರುವ ಕಾರಣ, ಪಾದಚಾರಿಗಳು ರಸ್ತೆಯ ಮೇಲೆ ನಡೆಯುವ ಪರಿಸ್ಥಿತಿ ಎದುರಾಗಿದೆ. ಇದು ಪಾದಾಚಾರಿಗಳಿಗೆ ಗಂಭೀರ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ. ಸರ್ಕ್ಯೂಟ್ ಹೌಸ್ನಿಂದ ಬಿಜೈವರೆಗಿನ ರಸ್ತೆ ಇಳಿಜಾರಿನಲ್ಲಿದೆ. ಹೀಗಾಗಿ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತವೆ. ಇದರೊಂದಿಗೆ ರಸ್ತೆಯ ಬಲಭಾಗದಲ್ಲಿ ಪಾದಚಾರಿ ಮಾರ್ಗ ಇಲ್ಲದಿರುವುದು, ಪಾದಚಾರಿಗಳಿಗೆ ಅಪಾಯ ತಂದೊಡ್ಡಿದೆ.
ಘಟನೆ ನಡೆದು ಎರಡು ತಿಂಗಳು ಕಳೆದರೂ ರಸ್ತೆ ಮೇಲಿನ ಮಣ್ಣು ಹಾಗೂ ಅವಷೇಶಗಳನ್ನು ತೆರವುಗೊಳಿಸಿಲ್ಲ. ಇದು ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಇಷ್ಟು ಸಮಯ ಕಳೆದರೂ, ಪಾದಚಾರಿ ಮಾರ್ಗವನ್ನು ತೆರವುಗೊಳಿಸಿ ಪಾದಚಾರಿಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.