ಉಡುಪಿ, ಸೆ. 10 (DaijiworldNews/AA): ಮಡಗಾಂವ್ ನಿಲ್ದಾಣದಲ್ಲಿ ರೈಲು ಹತ್ತುವಾಗ ಬ್ಯಾಗ್ ಕಳೆದುಕೊಂಡಿದ್ದ ಪ್ರಯಾಣಿಕರೊಬ್ಬರು 'ಆಪರೇಷನ್ ಅಮಾನಾತ್' ಅಡಿಯಲ್ಲಿ ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಸಕಾಲಿಕ ಪ್ರಯತ್ನದಿಂದ ಮರಳಿ ಪಡೆದುಕೊಂಡಿದ್ದಾರೆ.

ಸೆಪ್ಟೆಂಬರ್ 5 ರಂದು, ಭಟ್ಕಳದ ಮುರುಡೇಶ್ವರ ನಿವಾಸಿ ರಾಜೇಶ್ ಮೋಹನ್ ಆಚಾರಿ ಅವರು ಅವಸರದಲ್ಲಿ ರೈಲು ಹತ್ತುವಾಗ ತಮ್ಮ ಬ್ಯಾಗನ್ನು ಪ್ಲಾಟ್ಫಾರ್ಮ್ ನಂ 1 ರಲ್ಲಿ ಬಿಟ್ಟು ಹೋಗಿದ್ದರು. ನಂತರ ಅವರು ಕಳೆದುಹೋದ ತಮ್ಮ ಬ್ಯಾಗಿಗಾಗಿ ರೈಲ್ವೆ ಸಹಾಯವಾಣಿ ರೈಲ್ ಮದದ್ (139)ಗೆ ಕರೆ ಮಾಡಿ ತಿಳಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಆರ್ಪಿಎಫ್ ಸಿಬ್ಬಂದಿ, ಮುಖ್ಯ ಪೇದೆ ಪವನ್ ಸಿಂಗ್ ಖತ್ರಿ ಅವರು ಹೊಸ ಸೇತುವೆಯ ಇಳಿಜಾರಿನ ಬಳಿ ಬ್ಯಾಗನ್ನು ಪತ್ತೆ ಮಾಡಿದರು. ಸರಿಯಾದ ಪರಿಶೀಲನೆ ಮತ್ತು ದಾಖಲೆಗಳ ನಂತರ, ಸೆಪ್ಟೆಂಬರ್ 9 ರಂದು ಪ್ರಯಾಣಿಕರ ಸಮ್ಮುಖದಲ್ಲಿ ಬ್ಯಾಗನ್ನು ತೆರೆಯಲಾಯಿತು.
ಬ್ಯಾಗ್ ನಲ್ಲಿ 10,000 ರೂ ನಗದು, 1,200 ರೂ ಮೌಲ್ಯದ ಬಟ್ಟೆಗಳು, ಪ್ರಮುಖ ಐಡಿ ದಾಖಲೆಗಳು (ಆಧಾರ್, ಆರ್ಸಿ, ಲೈಸೆನ್ಸ್, ಪಾನ್), ಮತ್ತು ಚಾರ್ಜರ್ ಅನ್ನು ಅಧಿಕಾರಿಗಳು ಪತ್ತೆಮಾಡಿದ್ದಾರೆ. ಎಲ್ಲಾ ವಸ್ತುಗಳನ್ನು ರಾಜೇಶ್ ಅವರಿಗೆ ಹಸ್ತಾಂತರಿಸಲಾಯಿತು. ಅವರು ಅಧಿಕಾರಿಗಳ ಪ್ರಾಮಾಣಿಕತೆ ಮತ್ತು ತ್ವರಿತ ಕಾರ್ಯಕ್ಕಾಗಿ ಆರ್ಪಿಎಫ್ಗೆ ಧನ್ಯವಾದ ತಿಳಿಸಿದರು.
'ಆಪರೇಷನ್ ಅಮಾನಾತ್' ಅಡಿಯಲ್ಲಿ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಲು, ಪ್ರಯಾಣಿಕರಿಗೆ ಹಿಂದಿರುಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಹಾಗೂ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಜಾಗರೂಕರಾಗಿರಬೇಕು ಎಂದು ಆರ್ಪಿಎಫ್ ಪ್ರಯಾಣಿಕರಿಗೆ ತಿಳಿಸಿದರು.