ಬಂಟ್ವಾಳ, ಸೆ. 09 (DaijiworldNews/TA): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬಿಸಿರೋಡಿನಲ್ಲಿ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಿದ ಬಸ್ ಶೆಲ್ಟರ್ ನಿಂದ ಪ್ರತಿ ನಿತ್ಯ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಟ್ರಾಫಿಕ್ ಪೋಲೀಸರ ಮನವಿಯಂತೆ ತೆರವು ಮಾಡುವಂತೆ ಸಂಬಂಧಿಸಿದವರಿಗೆ ಪುರಸಭೆ ಆದೇಶ ಹೊರಡಿಸಿ, ತಿಂಗಳು ಕಳೆದರೂ ಶೆಲ್ಟರ್ ತೆರವು ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿವೆ.



ಬಿಸಿರೋಡಿನ ಹೃದಯ ಭಾಗವಾಗಿರುವ ಬಸ್ ನಿಲ್ದಾಣದ ಸಮೀಪದಲ್ಲಿ ಶ್ರೀನಿವಾಸ ಆರ್ಕೇಡ್ ಇದರ ಎದುರು ಬಸ್ ಸೆಲ್ಟರ್ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ರಿಕ್ಷಾ ಹಾಗೂ ವಾಹನಗಳನ್ನು ಅಡ್ಡಾದಿಡ್ಟಿ ನಿಲ್ಲಿಸುವ ಪರಿಣಾಮ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಟ್ರಾಫಿಕ್ ಎಸ್.ಐ.ಸುತೇಶ್ ಬಂಟ್ವಾಳ ಪುರಸಭೆಗೆ ಪತ್ರ ಬರೆದಿದ್ದರು.
ಈ ಪತ್ರವನ್ನು ಆದರಿಸಿ ಜೂನ್ 12ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೆರವುಗೊಳಿಸಲು ನಿರ್ಣಯವನ್ನು ಕೈಗೊಳ್ಳಲಾಗಿದ್ದು , ಕೌಶಲ್ ಎಡ್ವೈರ್ ಟೈಸರ್ ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ. ಪತ್ರ ಸಿಕ್ಕಿದ 7 ದಿನಗಳೊಳಗೆ ಬಸ್ ಶೆಲ್ಟರ್ನ್ನು ತೆರವುಗೊಳಿಸಿ ಪುರಸಭೆಗೆ ಬರಹ ಮೂಲಕ ನೀಡಲು ತಿಳಿಸಲಾಗಿದೆ. ತಿಂಗಳು ಕಳೆದರೂ ಬಸ್ ಶೆಲ್ಟರ್ ತೆರವಾಗದೆ ಹಾಗೆಯೇ ಉಳಿದಿದ್ದು, ಪುರಸಭೆಯ ನಿರ್ಣಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಲಾಗಿದೆ.