ಮಂಗಳೂರು, ಸೆ. 09 (Daijiworld News/TA): ಕೂಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಧವಿ ಎಂಬ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ. ಅವರು ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ದೊಡ್ಡ ರಸ್ತೆಯ ಗುಂಡಿಗೆ ಬಿದ್ದಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಮೀನಿನ ಟ್ರಕ್ ಅವರ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವಿಗೀಡಾದರು.










ಈ ದಾರುಣ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನುಂಟುಮಾಡಿದ್ದು, ಅವರು ಮೂಲ್ಕಿಯಿಂದ ಪಂಪ್ವೆಲ್ಗೆ ಸಾಗುವ ಹೆದ್ದಾರಿಯ ದುಸ್ಥಿತಿಯ ಬಗ್ಗೆ ಗಂಭೀರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಹಲವಾರು ದೊಡ್ಡ ಗುಂಡಿಗಳು ಇರುವುದರಿಂದ ದಿನಕ್ಕೊಂದು ಅಪಘಾತ ಸಂಭವಿಸುವಂತಹ ಪರಿಸ್ಥಿತಿಯಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಿವಾಸಿಗಳ ಪ್ರಕಾರ, ರಸ್ತೆಯ ದುರಸ್ತಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಕೂಡ ನಿರ್ಲಕ್ಷ್ಯ ಮಾತ್ರ ಮುಂದುವರೆದಿದೆ. ಇಂತಹ ದುರ್ಘಟನೆಗಳು ನಡೆದ ಬಳಿಕ ಮಾತ್ರ ತುರ್ತು ಕ್ರಮ ಕೈಗೊಳ್ಳುವ ನಿಯಮವಾಗಿಬಿಟ್ಟಿದೆ ಎಂದು ಜನರು ಆಕ್ರೋಶಗೊಂಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಇನ್ನೂ ಅನೇಕ ಅಮೂಲ್ಯ ಜೀವಗಳು ಈ ಅಪಾಯಕಾರಿ ರಸ್ತೆಯ ಗುಣಡಿಗೆ ಬಲಿಯಾಗಬಹುದು ಎಂದು ಎಚ್ಚರಿಸಿದ್ದಾರೆ.
ಲಾರಿ ಚಾಲಕ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲು
ಈ ಅಪಘಾತಕ್ಕೆ ಹೆದ್ದಾರಿಯ ನಿರ್ವಾಹಣೆಯನ್ನು ಸರಿಯಾಗಿ ನಿರ್ವಹಿಸದೇ, ರಸ್ತೆಯಲ್ಲಿ ಆಗಿರುವ ರಸ್ತೆಗುಂಡಿಗಳನ್ನು ಮುಚ್ಚದೇ ನಿರ್ಲಕ್ಷ್ಯತನದಿಂದ ಅಪಘಾತಕ್ಕೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯವರ ಮೇಲೆ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿರುವ ಲಾರಿ ಚಾಲಕನ ಮೇಲೆ ಮಂ.ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ *ಅ.ಕ್ರ 224/2025 ಕಲಂ 281, 106(1) ಬಿ.ಎನ್.ಎಸ್ ಮತ್ತು 198(ಎ) ಐಎಂವಿ ಕಾಯ್ದೆ*ರಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.