ಕುಂದಾಪುರ, ಸೆ. 09 (DaijiworldNews/TA): ಸದಾ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವ ಪಂಚವರ್ಣದ ಕಾರ್ಯ ವೈಖರಿ ಇಡೀ ಮನುಕುಲಕ್ಕೆ ಮಾದರಿಯಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಹೇಳಿದರು.

ತೆಕ್ಕಟ್ಟೆ ಗಣಪತಿ ಶ್ರೀಯಾನ್ ಮನೆಯಂಗಳದಿ ಕುಂದಾಪುರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ 270ನೇ ಪರಿಸರಸ್ನೇಹಿ ಹಸಿರುಜೀವ ಅಭಿಯಾನದ ಸಮಾರೋಪದಲ್ಲಿ ಮಾತನಾಡಿ ಸಂಘಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯಕ್ರಮಗಳನ್ನು ನೀಡುತ್ತವೆ.
ಆದರೆ ಪಂಚವರ್ಣ ಸಂಘಟನೆ ಒಂದು ಹೆಜ್ಜೆ ಮುಂದೆ ಇರಿಸಿ ನಿರಂತರ ಆರು ವರ್ಷಗಳಿಗೂ ಅಧಿಕವಾಗಿ ಪ್ರಕೃತಿಯನ್ನು ಆರಾಧಿಸುವ ಉಳಿಸುವ ಕಾಯಕ ನಿಜಕ್ಕೂ ಶ್ಲಾಘನೀಯ. ಇಂತಹ ಸಂಘಟನೆ ಗ್ರಾಮ ಗ್ರಾಮದಲ್ಲಿ ಹುಟ್ಟಿಕೊಳ್ಳಲಿ ಎಂದು ಹಾರೈಸಿದರು. ಇದೇ ವೇಳೆ ಸಹಾಯಕ ಆಯುಕ್ತೆ ರಶ್ಮಿ ಗಿಡವನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಹಲವು ಮನೆಗಳಿಗೆ ತೆರಳಿ ಗಿಡ ನೆಟ್ಟು ಅದರ ಮಹತ್ವ ತಿಳಿಸಲಾಯಿತು.