ಕುಂಬಳೆ, ಸೆ. 09 (DaijiworldNews/TA): ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿ ಕಡವತ್ನಲ್ಲಿ ಟೋಲ್ಗೇಟ್ ನಿರ್ಮಾಣದ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸೋಮವಾರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಜಾಥಾವು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟಕ್ಕೆ ಕಾರಣವಾಯಿತು. ಕುಂಬಳೆ ಪೇಟೆಯಿಂದ ಮೆರವಣಿಗೆ ಮೂಲಕ ಆಗಮಿಸಿದ ಜಾಥಾವನ್ನು ಟೋಲ್ಗೇಟ್ ಪರಿಸರದಲ್ಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕು ನುಗ್ಗಲು ನಡೆದಿದ್ದು ,ಲಘು ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದರು.




ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಜಾಥಾದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಪ್ರತಿಭಟನಾ ಕಾರರನ್ನು ಪೊಲೀಸರು ವಶಕ್ಕೆ ತೆಗೆದು ಬಳಿಕ ಬಿಡುಗಡೆ ಗೊಳಿಸಿದರು. ಕಾನೂನು ವಿರುದ್ಧವಾಗಿ ನಿಬಂಧನೆ ಗಳನ್ನು ಉಲ್ಲಂಘಿಸಿ ಟೋಲ್ ಗೇಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಹೋರಾಟ ಇನ್ನಷ್ಟು ತೀವ್ರ ಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಟೋಲ್ ಗೇಟ್ ಸಂಬಂಧಿತ ಅಂತಿಮ ತೀರ್ಪು ಹೈಕೋರ್ಟಿನಿಂದ ಬಂದ ಬಳಿಕ ಕಾಮಗಾರಿ ಆರಂಭಿಸುವುದೆಂದು ಗುತ್ತಿಗೆದಾರರು ತಿಳಿಸಿದ್ದಾರೆ. ಆದರೆ ಗುತ್ತಿಗೆದಾರರನ್ನು ಒತ್ತಾಯಿಸಿ ಹೆದ್ದಾರಿ ಇಲಾಖೆ ಟೋಲ್ ಗೇಟ್ ಕಾಮಗಾರಿ ನಡೆಸುತ್ತಿದೆ.
ಟೋಲ್ ಗೇಟ್ ವಿರುದ್ಧ ಕ್ರಿಯಾ ಸಮಿತಿಯ ಮೇಲ್ಮನವಿ ಹೈಕೋರ್ಟಿನಲ್ಲಿದ್ದು, ಈ ನಡುವೆ ಕಾಮಗಾರಿ ಮುಂದುವರಿಸುತ್ತಿರುವುದು ಪ್ರತಿಭಟನಾರ್ಹ ಎಂದು ಹೇಳಿದರು. ನಿಯಮದಂತೆ ಒಂದು ಟೋಲ್ ಗೇಟ್ ನೊಂದ ಇನ್ನೊಂದಕ್ಕೆ 60ಕಿ.ಮೀ.ಅಂತರ ಇರಬೇಕೆಂದು ನಿಬಂಧನೆ ಇದೆ. ಆದರೆ ತಲಪ್ಪಾಡಿ ಟೋಲ್ ಗೇಟ್ ನಿಂದ ಕೇವಲ 23 ಕಿ.ಮೀ ದೂರದ ಕುಂಬಳೆಯಲ್ಲಿ ಟೋಲ್ ಪ್ಲಾಜಾ ನಿರ್ಮಿಸುತ್ತಿರುವುದು ಈ ಕಾನೂನಿನ ಉಲ್ಲಂಘನೆ ಮತ್ತು ಜನದ್ರೋಹವಾಗಿದೆ. ಟೋಲ್ ಗೇಟ್ ವಿರುದ್ಧ ಗೆಲುವು ಲಭಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಎ.ಕೆ.ಎಂ ಅಶ್ರಫ್ ಮುನ್ನೆಚ್ಚರಿಕೆ ನೀಡಿದ್ದಾರೆ.