ಬಂಟ್ವಾಳ, ಸೆ. 08 (DaijiworldNews/AA): ಮನೆಯೊಂದಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನರಿಕೊಂಬಿನ ಬೋರುಗುಡ್ಡೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.



ಬೋರುಗುಡ್ಡೆ ನಿವಾಸಿ ರಮೇಶ್ ಅವರ ಮನೆಗೆ ಬೆಂಕಿ ತಗಲಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ನಡೆದಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ. ಇಂದು ಮುಂಜಾನೆ 4ರ ಸುಮಾರಿಗೆ ಘಟನೆ ನಡೆದಿದ್ದು, ಘಟನೆ ವೇಳೆ ಮಲಗಿದ್ದ ಮನೆ ಮಂದಿ ಹೊರಬಂದಿರುವುದರಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.
ಅದು ಆರ್ ಸಿಸಿ ಮನೆಯಾಗಿದ್ದು, ಮನೆಯೊಳಗಿದ್ದ ವಿದ್ಯುತ್ ಪರಿಕರಗಳು, ಇತರ ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ.