ಮಂಗಳೂರು, ಸೆ. 07(DaijiworldNews/TA): ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅಭಿವೃದ್ದಿ ಹೊಂದುತ್ತಿರುವ ಮಂಗಳೂರು ನಗರದ ಕೆಲವು ರಸ್ತೆಗಳು ಯಾವ ದುಸ್ಥಿತಿಯಲ್ಲಿವೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಜೊತೆ ನಗರದ ಕೆಲವೆಡೆ ಡ್ರೈನೇಜ್ ಹೋಲ್ ಗಳು ಬಾಯ್ದೆರೆದು ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿರುವ ಸನ್ನಿವೇಶಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಇದೇ ರೀತಿಯ ಸಮಸ್ಯೆ ಮಂಗಳೂರಿನ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಕಂಡು ಬಂದಿದೆ.

ಈ ಭಾಗದಲ್ಲಿ ಕಾಪಿಕಾಡ್ ಗೆ ಹೋಗುವ ಕಾಂಕ್ರಿಟ್ ರಸ್ತೆಯ ಬದಿಯಿಂದ ಗಲೀಜು ನೀರು ಹೊರಬರುತ್ತಿದ್ದು, ರಸ್ತೆ ಮೇಲೆಯೇ ಹರಿಯುತ್ತಿದೆ. ಇದೇ ರಸ್ತೆ ಬದಿ ಹರಿಯುತ್ತಿರುವ ಗಲೀಜು ನೀರಿಗೆ ಬಿದ್ದು ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಜೊತೆಗೆ ಈ ಭಾಗದಲ್ಲಿ ದುರ್ನಾತದಿಂದ ನಿಂತುಕೊಳ್ಳಲು ಕೂಡ ಅಸಹ್ಯ ಪಡುವಂತಾಗಿದೆ. ಮಂಗಳೂರಿಗೆ ಸರ್ಕಾರಿ ಬಸ್ ಗಳ ಮೂಲಕ ರಾಜ್ಯ ಹೊರರಾಜ್ಯಗಳಿಂದ ಬರುವ ಅನೇಕ ಮಂದಿ ಈ ದುಸ್ಥಿತಿ ಕಂಡು ಮಂಗಳೂರೆಂದರೆ ಇದೆಯಾ ಎಂದು ಅಸಹ್ಯದಿಂದ ಕೇಳುವ ಪರಿಸ್ಥಿತಿ ಇದೆ. ಇದು ಕೇವಲ ಒಂದೆರಡು ದಿನಗಳ ಸಮಸ್ಯೆಯಲ್ಲ. ಬದಲಾಗಿ ಕಳೆದ ಏಳು ತಿಂಗಳಿನಿಂದ ಈ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ರೀತಿಯಲ್ಲಿ ಪರಿಹಾರ ಕ್ರಮ ತೆಗೆದುಕೊಳ್ಳದೇ ಇರುವುದು ಅಚ್ಚರಿ ಮೂಡಿಸಿದೆ.
ದೌರ್ಭಾಗ್ಯವೆಂದರೆ ಕೇವಲ ಕೂಗಳತೆಯ ದೂರದಲ್ಲೇ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡವಿದ್ದರೂ ಅಲ್ಲಿನ ಅಧಿಕಾರಿಗಳ ಕಣ್ಣಿಗೂ ಈ ಸಮಸ್ಯೆ ಕಾಣದಿರುವುದು ದುರದೃಷ್ಟಕರ ಸಂಗತಿ. ಇನ್ನಾದರೂ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂದು ಕಾದು ನೋಡಬೇಕಿದೆ.