ಬಂಟ್ವಾಳ, ಸೆ. 06 (DaijiworldNews/AK): ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆ, ಯುವವಾಹಿನಿ (ರಿ.) ಬಂಟ್ವಾಳ ತಾಲೂಕು ಘಟಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಂಘ ಇದರ ಸಹಯೋಗದೊಂದಿಗೆ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಗುರು ಜಯಂತಿ ಆಚರಣೆ ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಸಂಘರ್ಷವಿಲ್ಲದೆ ಸಾಮಾಜಿಕ ನ್ಯಾಯವನ್ನು ಒದಗಿಸಿ, ಸರ್ವರಿಗೂ ಸಹಬಾಳ್ವೆ ನಡೆಸಲು ಅನುಕೂಲ ಕಲ್ಪಿಸಿದ ಮಹಾನ್ ಸಂತ ಬ್ರಹ್ಮ ಶ್ರೀ ನಾರಾಯಣ ಗುರುಗಳು, ಕೇವಲ ಬಲ್ಲವರ ಗುರುಗಳು ಅಲ್ಲ, ಸಮಸ್ತ ಮಾನವ ಕುಲಕ್ಕೆ ಗುರುಗಳಾಗಿದ್ದಾರೆ ಎಂದು ಅವರು ಹೇಳಿದರು.
ಪುಂಜಾಲಕಟ್ಟೆ ವಸತಿ ಶಾಲೆಯಲ್ಲಿ ಧ್ಯಾನ ಮಂದಿರ ನಿರ್ಮಾಣದ ಕನಸು ನನ್ನದಾಗಿದ್ದು, ಶಾಸಕ ಸ್ಥಾನದ ಅವಧಿ ಕೊನೆಯಾಗುವ ಮುನ್ನ ಮಾಡಿಯೇ ಸಿದ್ದ ಎಂದು ಭರವಸೆ ನೀಡಿದರು. ಪುಂಜಾಲಕಟ್ಟೆ ಬ್ರಹ್ಮ ಶ್ರೀ ನಾರಾಯಣ ವಸತಿ ಶಾಲಾ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು,ಅತ್ಯಂತ ಸುಸಜ್ಜಿತವಾಗಿ ನಿರ್ಮಾಣವಾಗಿದೆ ಎಂದು ಹೇಳಿದ ಅವರು ಅತ್ಯಂತ ಶೀಘ್ರವಾಗಿ ಬಾಡಿಗೆ ಕಟ್ಟಡದಲ್ಲಿರುವ ವಿದ್ಯಾರ್ಥಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಕಾಮಗಾರಿ ವೀಕ್ಷಿಸಲು ಹೋಗಿರುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇ. ಆದರೆ ವಿನಾಕಾರಣ ವಿಳಂಭ ಧೋರಣೆ ಸರಿಯಲ್ಲ, ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮಾಡುವ ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಮಕ್ಕಳ ಹಿತದೃಷ್ಟಿಯಿಂದ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮಾತುಗಳ ಮೂಲಕ ಸೂಚನೆ ನೀಡಿದರು. ನಾರಾಯಣ ಗುರು ವಸತಿ ಶಾಲೆಯ ಮಕ್ಕಳ ಜೊತೆ ನಾನು ನನ್ನ ಹುಟ್ಟು ಹಬ್ವವನ್ನು ಆಚರಿಸಿದ್ದೇನೆ ,ಅ ದಿನ ನನಗೆ ಅತ್ಯಂತ ಖುಷಿ ತಂದ ದಿನ ಎಂದು ಹೇಳಿದರು.
ಪುರಸಭಾ ಅಧ್ಯಕ್ಷ ವಾಸುಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ
ಭುವನೇಶ್ ಪಚ್ಚಿನಡ್ಕ, ಯುವವಾಹಿನಿ ಅಧ್ಯಕ್ಷ ನಾಗೇಶ್ ಪೂಜಾರಿ, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ರಾಗಿನಿಮಾಧವ ಚೆಂಡ್ತಿಮಾರ್ ಪುಂಜಾಲಕಟ್ಟೆ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಸ್ವಾಗತಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.