ಮಂಗಳೂರು,ಸೆ. 03 (DaijiworldNews/TA): 'ತುಳುನಾಡು, ನುಡಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡಿದ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ನಮ್ಮಲ್ಲಿವೆ. ತುಳು ಚಳುವಳಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಹಿರಿಯರೆಲ್ಲ ಗತಿಸಿ ಹೋಗಿದ್ದಾರೆ. ಯಾವುದಕ್ಕೂ ಒಂದು ತಾರ್ಕಿಕ ಅಂತ್ಯ ಈ ವರೆಗೆ ಲಭಿಸಿಲ್ಲವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣಕ್ಕೆ ಪ್ರಾಮಾಣಿಕವಾಗಿ ದುಡಿದವರು ಸದಾ ಸ್ಮರಣೀಯರು ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಬಿ.ದಾಮೋದರ ನಿಸರ್ಗ ಸಂಸ್ಮರಣ ಸಮಿತಿ ವತಿಯಿಂದ ಆ.೩೧ರಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರಗಿದ ದ್ವಿತೀಯ ಸಂಸ್ಮರಣ ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು. ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ್ ಕುಮಾರ್ ಐತಾಳ್ ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ದಿ.ನಿಸರ್ಗ ಅವರ ಪತ್ನಿ ಹೇಮಾ ದಾಮೋದರ ನಿಸರ್ಗ ಮತ್ತು ಮಕ್ಕಳು ಸ್ಥಾಪಿಸಿದ ಎರಡನೇ ವರ್ಷದ 'ಬಿ.ದಾಮೋದರ ನಿಸರ್ಗ ಪ್ರಶಸ್ತಿ'ಯನ್ನು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಕರ್ಮಯೋಗಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಪ್ರದಾನ ಮಾಡಲಾಯಿತು.
' ತುಳುಕೂಟ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಹರಿಕಥಾ ಪರಿಷತ್ ಅಧ್ಯಕ್ಷ ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲು , ಲೇಖಕ ಡಾ.ವಸಂತ ಕುಮಾರ್ ಪೆರ್ಲ ಅತಿಥಿಗಳಾಗಿದ್ದರು. ಡಾ. ವಿನ್ಯಾಸ್ ನಿಸರ್ಗ ಪ್ರಶಸ್ತಿ ಪತ್ರ ವಾಚಿಸಿದರು. ಸಂಸ್ಮರಣಾ ಸಮಿತಿ ಪ್ರಮುಖರಾದ ಡಾ.ವಿನಯ್ ಜತ್ತನ್ನ, ತ್ರಿದೇವ್ ನಿಸರ್ಗ ಮತ್ತು ಡಾ.ಮೇಘ ತ್ರಿದೇವ್ ನಿಸರ್ಗ ಮತ್ತಿತರರು ಉಪಸ್ಥಿತರಿದ್ದರು..ಕಾರ್ಯಕ್ರಮದ ಅಂಗವಾಗಿ ಸರಯೂ ಯಕ್ಷ ಬಳಗ ಕೋಡಿಕಲ್ ಅವರಿಂದ 'ಕೋಟಿ ಚೆನ್ನಯೆರ್' ತುಳು ಯಕ್ಷಗಾನ ಬಯಲಾಟ ಜರಗಿತು. ಹವ್ಯಾಸಿಗಳೊಂದಿಗೆ ವೃತ್ತಿಪರ ಕಲಾವಿದರೂ ಹಿಮ್ಮೇಳ - ಮುಮ್ಮೇಳಗಳಲ್ಲಿ ಭಾಗವಹಿಸಿದ್ದರು.