ಮಂಗಳೂರು, ಸೆ. 01 (DaijiworldNews/AK):ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು ಬೆಲೆಬಾಳುವ ಚಿನ್ನಾಭರಣ ಕಳವುಗೈದಿರುವ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದುಕೊಂಡವರು ವಿಮಾನ ನಿಲ್ದಾಣದಲ್ಲಿ ಲೆಗೇಜ್ ಲೋಡ್ - ಅನ್ ಲೋಡ್ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.
ಸಿಆರ್ಪಿಎಫ್ ಜವಾನ ಹರಿಕೇಶ್ ಎಂಬವರ ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಸಂಬಂಧಿಕರ ಮದುವೆಗಾಗಿ ಶನಿವಾರ ಬೆಳಗ್ಗೆ 8:45ರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಗಳೂರಿನಿಂದ ಹೊರಟು ಅದೇ ದಿನ ಬೆಳಗ್ಗೆ 9:30ಕ್ಕೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ವಿಮಾನ ನಿಲ್ದಾಣದ ಹೊರಗೆ ಬಂದು ತನ್ನ ಲಾಗೇಜ್ ಟ್ರಾಲಿ ಬ್ಯಾಗ್ ನ ಲಾಕ್ ತೆರದಿತ್ತು. ತಕ್ಷಣ ಬ್ಯಾಗ್ ಪರಿಶೀಲಿಸಿದಾಗ 56 ಗ್ರಾಂ ತೂಕದ ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆ ಕಳವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಅವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಂಗಳೂರು ವಿಮಾನ ನಿಲ್ದಾಣದಲ್ಲಿನ ಲೋಡ್ - ಅನ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಮಾಹಿತಿ ತಿಳಿದು ಬಂದಿದೆ.