ಉಳ್ಳಾಲ, ಸೆ. 01 (DaijiworldNews/TA): ಯುವ ಸಮುದಾಯಕ್ಕೆ ಭತ್ತವನ್ನ ಹೇಗೆ ಬೆಳೆಸಲಾಗುವುದು ಮತ್ತು ಅದರ ಬಗ್ಗೆ ಸಮಗ್ರ ಮಾಹಿತಿಯ ಜೊತೆಗೆ ಕೃಷಿ ಕಾಯಕದಲ್ಲೂ ಅವರನ್ನು ತೊಡಗಿಸುವ ಕಾರ್ಯ ಅತ್ಯಂತ ಅರ್ಥ ಪೂರ್ಣವಾಗಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯ ಹಡಿಲು ಬಿದ್ದ ಕೃಷಿ ಭೂಮಿಗಳನ್ನು ಕಂದಾಯ ಇಲಾಖೆಯ ಮೂಲಕ ಸರ್ವೆ ಮಾಡಿಸಿ ಕೃಷಿ ಇಲಾಖೆ ಮೂಲಕ ಗ್ರಾಮವಾರು ಕೇಂದ್ರೀಕರಿಸಿ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸೇರಿ ಫಲವತ್ತಾದ ಉಳ್ಳಾಲ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗುವುದೆಂದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ತೊಕ್ಕೊಟ್ಟು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ,ಮಾಧ್ಯಮ ಕೇಂದ್ರ ತೊಕ್ಕೊಟ್ಟು ,ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ,ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ನೇತೃತ್ವದಲ್ಲಿ ಕೃಷಿ ಇಲಾಖೆ ಮಂಗಳೂರು, ಪಿಲಾರಿನ ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆಯ ಸಹಯೋಗ, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಮಾರ್ಗದರ್ಶನದೊಂದಿಗೆ ಗ್ರಾಮ ಸಂಪರ್ಕ ಅಭಿಯಾನದ ಅಂಗವಾಗಿ ಸೋಮೇಶ್ವರ ಗ್ರಾಮದ ಪಿಲಾರು ಬೈಲ್ ನಲ್ಲಿ 'ಕೃಷಿಯೆಡೆಗೆ ವಿದ್ಯಾರ್ಥಿ ಸಮೂಹ ಹಾಗೂ ಯುವಜನತೆಯ ನಡೆ" ಕೃಷಿ ಅಧ್ಯಯನ ಹಾಗೂ ಚಟುವಟಿಕೆಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ ಭತ್ತದ ಸಸಿ ನಾಟಿ ಮಾಡುವ ವಿಧಾನವನ್ನು ಸ್ವತ: ತಾವೇ ಮಾಡಿ ತೋರಿಸುವ ಮೂಲಕ ಖಾದರ್ ಗಮನ ಸೆಳೆದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷತೆ ವಹಿಸಿದ್ದರು.ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಂಟಿ ಕೃಷಿ ನಿರ್ದೇಶಕ ಡಾ. ಹೊನ್ನಪ್ಪ ಗೋವಿಂದ ಗೌಡ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಜೆ.ರಮೇಶ್ , ವಿಜ್ನಾನಿ ಡಾ| ಹರೀಶ್ ಶೆಣೈ, ಗಂಗಯ್ಯ ಗಟ್ಟಿ ಪಿಲಾರು ಹೊಸಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.