ಮಂಗಳೂರು, ಆ. 31 (DaijiworldNews/TA): ಕೊಂಕಣಿ ಸಂಗೀತ ದಿಗ್ಗಜ, ವಿಶ್ವ ಕೊಂಕಣಿ ಕಲಾ ರತ್ನ ಎರಿಕ್ ಒಝೇರಿಯೊ ಅವರ ಅಂತ್ಯಕ್ರಿಯೆಯು ಸರಕಾರಿ ಗೌರವ ಹಾಗೂ ಅಭಿಮಾನಿಗಳ ಭಾವುಕ ಕ್ಷಣಗಳ ಸಂಗೀತಾರ್ಚಣೆಯ ಮೂಲಕ ನಡೆಯಿತು. ಬೆಳಿಗ್ಗೆ ಸೈಂಟ್ ವಿನ್ಸೆಂಟ್ ಫೆರೆರ್ ಚರ್ಚ್ ವೆಲೆನ್ಶಿಯಾದಲ್ಲಿ ನಡೆದ ಅಂತ್ಯಸಂಸ್ಕಾರ ಬಲಿಪೂಜೆಯಲ್ಲಿ ಧಾರ್ಮಿಕ ಸಾಂಸ್ಕೃತಿಕ ಹಾಗೂ ಸಂಗೀತ ಲೋಕದ ನೂರಾರು ಗಣ್ಯರು ಪಾಲ್ಗೊಂಡರು. ಬಲಿಪೂಜೆಯ ನಂತರ ನಡೆದ ಸರಕಾರಿ ಗೌರವ ಅರ್ಪಣೆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತ್ ಶಾಸಕ ಐವನ್ ಡಿ ಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮೊದಲಾದವರು ನೇತೃತ್ವ ನೀಡಿದರು.








ನಂತರ ಶಕ್ತಿನಗರದಲ್ಲಿರುವ ಎರಿಕ್ ಒಝೇರಿಯೊ ಅವರ ಕರ್ಮಭೂಮಿ ಕಲಾಂಗಣ್ ನಲ್ಲಿ ಅಭಿಮಾನಿಗಳಿಗೆ ಎರಿಕ್ ಅವರಿಗೆ ಅಂತಿಮ ಗೌರವ ಸಲ್ಲಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಶತ್ತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿ ಸೋಜಾ, ಮಾಜಿ ಶಾಸಕ ಜೆ.ಆರ್ ಲೋಬೊ, ಪ್ರಗತಿಪರ ಹೋರಾಟಗಾರ ನರೇಂದ್ರ ನಾಯಕ್, ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮೊದಲಾದವರು ಕಲಾಂಗಣ್ ನಲ್ಲಿ ಎರಿಕ್ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಇದೇ ವೇಳೆ ಮದರ್ ತೆರೆಸಾ ಬ್ಯಾಂಡ್ ಹೊನ್ನಾವರ, ಹಾಗೂ ಕಲಾಂಗಣ್ ಸಂಗೀತ ಕಲಾವಿದರಿಂದ ಎರಿಕ್ ಅವರಿಗೆ ಸಂಗೀತಾಂಜಲಿ ಕಾರ್ಯಕ್ರಮವು ನಡೆಯಿತು.
ಇನ್ನು ನೆರೆದ ಸಾವಿರಾರು ಎರಿಕ್ ಅಭಿಮಾನಿಗಳಿಗೆ ವಂದಿಸಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ . ಜೆ. ಪಿಂಟೊ ಅವರು ಎರಿಕ್ ಅವರ ಸ್ಮರಣಾರ್ಥ ಕಲಾಂಗಣ್ ನಲ್ಲಿ ಮುಂದಿನ ದಿನಗಳಲ್ಲಿ ಹನ್ನೆರಡು ಗಂಟೆಗಳ ನಿರಂತರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದರು. ನಂತರ ಎರಿಕ್ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಬೋಳೂರು ಚಿತಾಗಾರಕ್ಕೆ ಕೊಂಡೊಯ್ದು ಅಗ್ನಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.