ಉಡುಪಿ,ಆ. 31 (DaijiworldNews/TA): ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ, ವಿಗ್ರಹ ಮಾಡಬಹುದು. ಅದೇ ರೀತಿ ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಇಂದಿನ ದಿನಗಳಲ್ಲಿ ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವವರು ಜಾಸ್ತಿಯಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಅವರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪರ್ಯಾಯ ಶ್ರೀಗಳಾದ ಶ್ರೀಸುಗುಣೇಂದ್ರತೀರ್ಥರ 64ನೇಯ ಜನ್ಮ ನಕ್ಷತ್ರೋತ್ಸವದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಧರ್ಮ ಎಂಬುದು ಮನುಷ್ಯನಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಧರ್ಮ ಯಾವುದಾದರೂ ತತ್ವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಶ್ರೀಕೃಷ್ಣ ಒಬ್ಬ ಶಿಕ್ಷಕ, ಚಿಂತಕ, ಮಾರ್ಗದರ್ಶಕ, ರಾಜಕಾರಣಿ, ಪ್ರೇಮಿ, ತತ್ವಜ್ಞಾನಿ ಎಲ್ಲವೂ ಆಗಿದ್ದಾನೆ.
ಜೀವನದಲ್ಲಿ ಯಶಸ್ವಿಯಾಗಲು ಕೃಷ್ಣ ತಂತ್ರವೂ ಬೇಕು ಎಂದು ವೇದಿಕೆಯಲ್ಲಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರತ್ತ ನೋಡಿ ಹೇಳಿದ ಡಿಕೆಶಿ, ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ದೇವರಲ್ಲಿ ಕಷ್ಟಸುಖದ ಪ್ರಾರ್ಥನೆ ಮಾಡುತ್ತೇವೆ. ಸೋಲು ಮರೆತು ಗೆಲುವಿಗಾಗಿ ಪ್ರಾರ್ಥನೆ ಮಾಡಬೇಕು. ದೇವರು ವರ-ಶಾಪ ಕೊಡುವುದಿಲ್ಲ. ನಿಮಗೆ ಅವಕಾಶವನ್ನು ಕೊಡುತ್ತಾನೆ. ನಾವು ಧರ್ಮವನ್ನು ಕಾಯಬೇಕು, ಧರ್ಮವನ್ನು ಉಳಿಸಬೇಕು. ದೈವ ಧರ್ಮದ ಪರ ನಿಂತು ಎರಡನ್ನೂ ಉಳಿಸಿಕೊಂಡು ಹೋಗಬೇಕು. ಸೋಲು ಗೆಲುವು ಸಾಮಾನ್ಯ. ಹಾಗಾಗಿ ಪ್ರಯತ್ನ ಮಾಡುವುದನ್ನು ಬಿಡಬಾರದು ಎಂದು ಅವರು ಹೇಳಿದರು.